ಕೋಸ್ಟಲ್ ಬರ್ತ್ ಯೋಜನೆ ವಿರೋಧ ಹೋರಾಟ, ಯೋಜನೆ ಕೈ ಬಿಡುವಂತೆ ಆಗ್ರಹ

ಕೋಸ್ಟಲ್ ಬರ್ತ್ ಯೋಜನೆ ವಿರೋಧ ಹೋರಾಟ, ಯೋಜನೆ ಕೈ ಬಿಡುವಂತೆ ಆಗ್ರಹ

Apr 05, 2021 07:53:42 PM (IST)
ಕೋಸ್ಟಲ್ ಬರ್ತ್ ಯೋಜನೆ ವಿರೋಧ ಹೋರಾಟ, ಯೋಜನೆ ಕೈ ಬಿಡುವಂತೆ ಆಗ್ರಹ

ಮಂಗಳೂರು: ಕೋಸ್ಟಲ್ ಬರ್ತ್ ಯೋಜನೆಗೆ ಮಂಗಳೂರಿನಲ್ಲಿ ವಿರೋಧ ವ್ಯಕ್ತವಾಗಿದೆ. ಕಸಬಾ ಬೆಂಗರೆ ಪ್ರದೇಶದ ಜನರು ವ್ಯಾಪಾರ ವಹಿವಾಟು ಸ್ಥಗಿತಗೊಳಿಸಿ ಯೋಜನೆ ವಿರುದ್ಧ ಹೋರಾಟ ಮಾಡಿದರು.

ಮಂಗಳೂರು ನಗರ ದ್ವೀಪ ಪ್ರದೇಶಗಳಲ್ಲಿ ಒಂದಾದ ಕಸಬಾ ಬೆಂಗರೆಯಲ್ಲಿ ಕೋಸ್ಟಲ್ ಬರ್ತ್ ಯೋಜನೆ ನಡೆಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದ್ದು ಜನರು ವಿರೋಧ ವ್ಯಕ್ತಪಡಿಸಿದ್ದಾರೆ. ಈ ಯೋಜನೆ ಅನುಷ್ಠಾನವಾದರೆ ಮೂಲ ಕಸುಬು ನಾಡ ದೋಣಿ ಮೀನುಗಾರಿಕೆಗೆ, ಅಲ್ಲದೆ ಸ್ಥಳೀಯ ಶಾಲೆ, ದಫನ ಭೂಮಿಗೂ ತೊಂದರೆಯಾಗುತ್ತದೆ. ಈ ಹಿನ್ನಲೆಯಲ್ಲಿ ಸರ್ಕಾರ ಯೋಜನೆಯನ್ನು ಕೈ ಬಿಡಬೇಕೆಂದು ಜನರು ಆಗ್ರಹಿಸಿದ್ದಾರೆ. ಸರ್ಕಾರದ ಈ ಯೋಜನೆ ವಿರೋಧಿಸಿ ಇಡೀ ದಿನ ಬೆಂಗರೆ ಪ್ರದೇಶದಲ್ಲಿ ಜನ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ಪ್ರತಿಭಟನೆ ಮಾಡಿದರು.

ಸಾಗರಮಾಲ ಯೋಜನೆಯಡಿ ಕೇಂದ್ರ ಸರ್ಕಾರದ 25 ಕೋಟಿ ರೂ. ಮತ್ತು ರಾಜ್ಯ ಸರಕಾರದ 40 ಕೋಟಿ ರೂ. ಸೇರಿ ಒಟ್ಟು 65 ಕೋಟಿ ರೂ. ವೆಚ್ಚದಲ್ಲಿ ಕೋಸ್ಟಲ್‌ ಬರ್ತ್ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ.
ಪ್ರಸ್ತಾವಿತ ಧಕ್ಕೆ 350 ಮೀ. ಉದ್ದ ಮತ್ತು 7 ಮೀ. ಆಳ ಇರಲಿದೆ. ಈಗ ಧಕ್ಕೆಯಲ್ಲಿ ಫಲ್ಗುಣಿ ನದಿ 4 ಮೀ. ಆಳವಿದ್ದರೆ, 7 ಮೀ. ಆಳ ಮಾಡುವುದರಿಂದ ಬೃಹತ್‌ ನೌಕೆಗಳು ಬರಲಿವೆ. ಈಗ 500 ಟನ್‌ ಶಿಪ್‌ ಬರುತ್ತಿದ್ದರೆ, ಮುಂದೆ ಒಂದು ಸಾವಿರ ಟನ್‌ ಸಾಮರ್ಥ್ಯದ 100-150 ಮೀ. ಉದ್ದದ ಶಿಪ್‌ ತರಬಹುದು. ಮಂಗಳೂರು ಹಳೆ ಬಂದರ್‌ ಧಕ್ಕೆ 4 ಮೀ. ಮತ್ತು ಎನ್‌ಎಂಪಿಟಿಯಲ್ಲಿ 12 ಮೀ. ಆಳ ಇದೆ. ಹಳೆ ಬಂದರಿನಿಂದ ಸಣ್ಣ ಪ್ರಮಾಣದಲ್ಲಿ ಬಹುತೇಕ ಲಕ್ಷದ್ವೀಪಕ್ಕೆ ಮಾತ್ರ ಸರಕು ಸಾಗಾಟ ನಡೆಯುತ್ತದೆ. ಹೊಸ ಧಕ್ಕೆ ನಿರ್ಮಾಣವಾದರೆ, ದೊಡ್ಡ ಪ್ರಮಾಣದಲ್ಲಿ ಲಕ್ಷದ್ವೀಪ, ಗುಜರಾತ್‌, ಮಹಾರಾಷ್ಟ್ರ ಸಹಿತ ಇತರ ರಾಜ್ಯಗಳಿಗೂ ಆಮದು-ರಫ್ತು ಮಾಡಬಹುದು.ಒಂದು ಬಾರಿಗೆ 5-10 ಸಾವಿರ ಟನ್‌ ಸರಕು ಕಳುಹಿಸಬಹುದು. ಬೆಂಗರೆ ಬದಿಯಿಂದ ಅಳಿವೆ ಬಾಗಿಲು ತನಕ 7 ಮೀ. ಆಳ ಮಾಡಿ ಹೂಳೆತ್ತುವುದರಿಂದ ಮೀನುಗಾರಿಕೆ ಬೋಟ್‌ಗಳ ಸಂಚಾರಕ್ಕೆ ತುಂಬಾ ಅನುಕೂಲ ಆಗಲಿದೆ.