ಭಾರೀ ಮಳೆಯಿಂದಾಗಿ ಉಜಿರೆ ಪೇಟೆಯಲ್ಲಿ ಕೃತಕ ನದಿ ನಿರ್ಮಾಣ

ಭಾರೀ ಮಳೆಯಿಂದಾಗಿ ಉಜಿರೆ ಪೇಟೆಯಲ್ಲಿ ಕೃತಕ ನದಿ ನಿರ್ಮಾಣ

DA   ¦    Sep 12, 2020 06:12:29 PM (IST)
ಭಾರೀ ಮಳೆಯಿಂದಾಗಿ ಉಜಿರೆ ಪೇಟೆಯಲ್ಲಿ ಕೃತಕ ನದಿ ನಿರ್ಮಾಣ

ಬೆಳ್ತಂಗಡಿ: ತಾಲೂಕಿನ ಅತಿ ದೊಡ್ಡ ಗ್ರಾಮ, ಶೈಕ್ಷಣಿಕ‌ ನಗರಿ ಹಾಗೂ ಕೇಂದ್ರ ಬಿಂದು ಉಜಿರೆ. ಬೆಳ್ತಂಗಡಿ, ಚಾರ್ಮಾಡಿ ಹಾಗೂ ಧರ್ಮಸ್ಥಳವನ್ನು ಸಂಪರ್ಕಿಸುವ ಪ್ರಧಾನ ಕೇಂದ್ರ ಉಜಿರೆ. ಎಲ್ಲ ಕಡೆಯಿಂದ ಬರುವ ವಾಹನಗಳು ಉಜಿರೆಗಾಗಿಯೇ ಸಂಚರಿಸಬೇಕು. ಈ ಮೂರುಭಾಗಗಳಿಂದ ದಿನಂಪ್ರತಿ ಸಹಸ್ರಾರು ವಾಹನಗಳು ಉಜಿರೆಯ ಮೂಲಕವೇ ಹಾದುಹೋಗುತ್ತವೆ. ಉಜಿರೆ ಧಾರ್ಮಿಕ,ಶೈಕ್ಷಣಿಕ,ಸಾಮಾಜಿಕ ಹಾಗೂ ಆರ್ಥಿಕ ವ್ಯಾಪಾರಿ ಕೇಂದ್ರವಾಗಿ ದಿನದಿಂದ ದಿನಕ್ಕೆ ಬೆಳೆಯುತ್ತಿದ್ದರೂ ಇಲ್ಲಿಯ ಮೂಲಭೂತ ಸಮಸ್ಯೆಗಳು ಮಾತ್ರ ಹಾಗೆಯೇ ಉಳಿದಿವೆ. ಅವುಗಳಲ್ಲಿ ಮುಖ್ಯವಾದುದು ಉಜಿರೆ ಪೇಟೆಯ ಒಳಚರಂಡಿ ಸಮಸ್ಯೆ!

ಮಳೆಗಾಲದಲ್ಲಂತೂ ಉಜಿರೆ ಪೇಟೆ ಸದಾ ಕೆಸರುಮಯ. ನಗರದ ಮಳೆನೀರೆಲ್ಲ ಹರಿಯುವುದು ಹೆದ್ದಾರಿಯಲ್ಲೇ . ರಸ್ತೆಯ ಎರಡುಬದಿಯಲ್ಲಿ ಮಳೆನೀರು ರಸ್ತೆಯಲ್ಲೇ ಹರಿದುಹೋಗಿ ರಸ್ತೆ ಗುಂಡಿಗಳಾಗುತ್ತಿವೆ, ಮುಖ್ಯ ವೃತ್ತ ಹಾಗು ಧರ್ಮಸ್ಥಳ ಮಹಾದ್ವಾರದ ಬಳಿ ಹೆದ್ದಾರಿಯಲ್ಲೇ ನೀರು ಹರಿದುಹೋಗಿ ಹೊಂಡಗಳಾಗುತ್ತಿವೆ. ರಸ್ತೆ ಬದಿ ನಡೆದುಹೋಗುತ್ತಿರುವ ಪಾದಚಾರಿಗಳಿಗೆ ವಾಹನಗಳಿಂದ ಕೆಸರುನೀರಿನ ಅಭಿಷೇಕವಾಗುವುದು ಸಾಮಾನ್ಯವಾಗಿದೆ.

ಇಕ್ಕೆಲಗಳಿಂದ ಬರುವ ವಾಹನಗಳ ಕೆಸರೆರಚಾಟ ತಪ್ಪಿಸಲು ಜನಸಾಮಾನ್ಯರು ಪರದಾಡಬೇಕಾಗುತ್ತಿದೆ. ದ್ವಿಚಕ್ರ,ಚತುಶ್ಚಕ್ರ ವಾಹನಗಳ ವೇಗಕ್ಕೆ ಸಂಚಾರಿಗಳು ಒದ್ದೆಯಾಗುತ್ತಲೇ ಹಿಡಿಶಾಪ ಹಾಕುತ್ತಿದ್ದಾರೆ.

ಗ್ರಾಮಸಭೆಗಳಲ್ಲಿ,ಪತ್ರಿಕೆಗಳಲ್ಲಿ,ಹೆದ್ದಾರಿ ಇಲಾಖೆಗೆ ಅನೇಕ ಬಾರಿ ದೂರು ನೀಡಿದ್ದರೂ ಸಮಸ್ಯೆ ಬಗೆಹರಿದಿಲ್ಲ. ನಗರದ ಎರಡೂಕಡೆ ರಸ್ತೆಯಲ್ಲಿ ಮಳೆನೀರು ಹರಿದುಹೋಗುವಂತೆ ಸೂಕ್ತ ಒಳಚರಂಡಿ ವ್ಯವಸ್ಥೆ ಸಮರ್ಪಕವಾಗಿ ಆಗಬೇಕಾಗಿದೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆಗಳು ತುರ್ತಾಗಿ ಗಮನಹರಿಸಿ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕಾಗಿದೆ.