ಮಡಿಕೇರಿ: ಟಿಪ್ಪು ಸುಲ್ತಾನ್ ದಿನಾಚರಣೆಯ ಪರ-ವಿರೋಧಿ ಗುಂಪುಗಳ ನಡುವೆ ನಡೆದ ಹೋರಾಟಕ್ಕೆ ಒಬ್ಬ ಬಲಿಯಾಗಿದ್ದು, ಮಡಿಕೇರಿ ನಗರ ಅಕ್ಷರಶಃ ರಣರಂಗವಾಗಿ ಮಾರ್ಪಟ್ಟಿದೆ.
ನಗರದ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಗುಂಪೊಂದು ಕಲ್ಲು ತೂರಾಟ ನಡೆಸಿದ ಪರಿಣಾಮ ವಿಶ್ವಹಿಂದೂ ಪರಿಷತ್ ನ ಸಂಘಟನಾ ಕಾರ್ಯದರ್ಶಿ ಕುಟ್ಟಪ್ಪ ಸೇರಿದಂತೆ ಮೂರ್ನಾಲ್ಕು ಮಂದಿ ಗಾಯಗೊಂಡಿದ್ದರೂ ಗಂಭೀರ ಗಾಯಗೊಂಡಿದ್ದ ಕುಟ್ಟಪ್ಪ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಇದರಿಂದ ಜಿಲ್ಲೆಯಾದ್ಯಂತ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು ವೀರಾಜಪೇಟೆ, ಸೋಮವಾರಪೇಟೆ ಸೇರಿದಂತೆ ಹಲವು ಪಟ್ಟಣಗಳಲ್ಲಿ ಉದ್ವಿಘ್ನತೆ ಉಂಟಾಗಿದೆ.
ಜಿಲ್ಲಾಡಳಿತ ಟಿಪ್ಪು ಸುಲ್ತಾನ್ ಜನ್ಮದಿನಾಚರಣೆ ಆಚರಿಸಲು ಸಿದ್ಧತೆ ನಡೆಸಿತ್ತಾದರೂ ಸೂಕ್ತ ಬಂದೋಬಸ್ತ್ ಮಾಡುವಲ್ಲಿ ವಿಫಲವಾಗಿರುವುದು ಮಡಿಕೇರಿ ರಣರಂಗವಾಗಲು ಕಾರಣವಾಗಿದೆ. ಜಿಲ್ಲಾಡಳಿತ ಮೆರವಣಿಗೆ ನಡೆಸುವುದಿಲ್ಲ ಎಂದು ಹೇಳಿತ್ತಾದರೂ ಇಂದು ಬೆಳಿಗ್ಗೆ ಟಿಪ್ಪು ದಿನಾಚರಣೆ ಪರವಾಗಿ ಒಂದು ಗುಂಪು ಸಾಕಷ್ಟು ಸಂಖ್ಯೆಯಲ್ಲಿ ಜಮಾಯಿಸಿ ಮೆರವಣಿಗೆ ನಡೆಸಿದರೆ ಮತ್ತೊಂದು ವಿರೋಧಿ ಗುಂಪು ಜನರಲ್ ತಿಮ್ಮಯ್ಯ ವೃತ್ತದಲ್ಲಿ ಪ್ರತಿಭಟನೆ ನಡೆಸುತ್ತಿತ್ತು.
ಜಿಲ್ಲಾಡಳಿತ ಜನರಲ್ ತಿಮ್ಮಯ್ಯ ವೃತ್ತದ ಅನತಿ ದೂರದಲ್ಲಿರುವ ಟೌನ್ ಹಾಲ್ ನಲ್ಲಿ ಟಿಪ್ಪು ಜಯಂತಿಯನ್ನು ಆಯೋಜಿಸಿತ್ತು. ಆದರೆ ಈ ಕಾರ್ಯಕ್ರಮಕ್ಕೆ ಸಹಸ್ರ ಸಂಖ್ಯೆಯಲ್ಲಿ ಒಂದು ಗುಂಪಿನ ಜನ ಆಗಮಿಸಿದ್ದು, ಜನರಲ್ ತಿಮ್ಮಯ್ಯ ವೃತ್ತದಲ್ಲಿ ಎರಡು ಗುಂಪಿನ ನಡುವೆ ಘರ್ಷಣೆಗೆ ಕಾರಣವಾಗಿದೆ.
ವಾಹನದಲ್ಲಿ ಬಂದ ಗುಂಪೊಂದು ಕಲ್ಲು ತೂರಿತು ಎನ್ನಲಾಗಿದೆ. ಈ ಸಂದರ್ಭ ಕಲ್ಲು ಕುಟ್ಟಪ್ಪ ಅವರ ತಲೆಗೆ ಬಿದ್ದಿದೆ. ಇದರಿಂದ ಅವರು ಗಂಭೀರ ಗಾಯಗೊಂಡಿದ್ದ ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಈ ಘಟನೆ ಬಳಿಕ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿದ್ದು, ಪೊಲೀಸರು ಲಾಠಿ ಚಾರ್ಜ್ ಹಾಗೂ ಆಶ್ರುವಾಯು ಸಿಡಿಸಿ ಗುಂಪುಗಳನ್ನು ಚದುರಿಸಲಾಗಿದೆ. ಅಲ್ಲದೆ ಸ್ಥಳಕ್ಕೆ ಕೆಎಸ್ಆರ್ ಪಿ, ಡಿಎಆರ್ ತುಕುಡಿಗಳು ಸೇರಿದಂತೆ ದಕ್ಷಿಣ ವಲಯ ಐಜಿಪಿ ವಿ.ಕೆ.ಸಿಂಗ್ ಸೇರಿದಂತೆ ಹಲವು ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ಪರಿಶೀಲಿಸುತ್ತಿದ್ದಾರೆ.
ಈಗಾಗಲೇ ನಗರದಲ್ಲಿ 144 ಸೆಕ್ಷನ್ ಜಾರಿ ಮಾಡಲಾಗಿದೆ. ಬಂದ್ಗೆ ಕರೆ ನೀಡಿರುವ ಹಿನ್ನಲೆಯಲ್ಲಿ ಇಡೀ ಕೊಡಗು ಸ್ತಬ್ದಗೊಂಡಿದೆ. ಬೆಳಿಗ್ಗೆ ಬಸ್ಸಿಗೆ ಕಲ್ಲು ತೂರಲಾಗಿದೆ. ಕುಶಾಲನಗರ ಕೊಪ್ಪ, ಗೋಣಿಕೊಪ್ಪ, ಸೋಮವಾರಪೇಟೆ, ವೀರಾಜಪೇಟೆಯಲ್ಲಿ ಪ್ರತಿಭಟನೆ ನಡೆಸಲಾಗಿದೆ. ಒಟ್ಟಾರೆ ಇಡೀ ಕೊಡಗು ರಣರಂಗವಾಗುವ ಪರಿಸ್ಥಿತಿ ಎದುರಾಗಿದೆ. ಇದುವರೆಗೆ ಶಾಂತಿಯ ನಾಡಾಗಿದ್ದ ಕೊಡಗಿನಲ್ಲಿ ಈ ರೀತಿಯ ಘಟನೆ ನಡೆದಿರುವುದಕ್ಕೆ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಯ ವೈಫಲ್ಯ ಕಾರಣ ಎಂಬ ಆರೋಪ ಕೇಳಿ ಬರುತ್ತಿದೆ.