ಹೆಡಿಯಾಲ: ಹರತಲೆ ಗ್ರಾಮದಲ್ಲಿ ಅಂಗನವಾಡಿ ಇದ್ದರೂ ಮಕ್ಕಳು ಹೊರಗೆ ಬಿಸಿಲು, ಮಳೆ, ಚಳಿಗೆ ಕುಳಿತು ಕೊಳ್ಳಬೇಕಾದ ದುಸ್ಥಿತಿ ಬಂದೊದಗಿದೆ.
ಕಳೆದ 15 ವರ್ಷಗಳಿಂದ ಹಂಚಿನ ಛಾವಣಿ ಹೊಂದಿ ಸುಸ್ಥಿತಿಯಲ್ಲಿದ್ದರೂ ಅದನ್ನು ದುರಸ್ತಿ ಮಾಡುವ ನೆಪದಲ್ಲಿ ಕೊಠಡಿಯ ನೆಲವನ್ನು ಕಿತ್ತು ಹಾಕಲಾಗಿದೆ. ಆದರೆ ಕಿತ್ತು ಹಾಕುವಾಗ ಇದ್ದ ಹುಮ್ಮಸ್ಸು ಅದನ್ನು ದುರಸ್ತಿ ಮಾಡುವ ಸಂದರ್ಭ ಇಲ್ಲದೆ ಇರುವ ಕಾರಣ ಅಂಗನವಾಡಿ ಮಕ್ಕಳು ಮರದಡಿಯ ಕೆಳಗೆ ಕುಳಿತು ದಿನ ದೂಡುವ ಪರಿಸ್ಥಿತಿ ಬಂದೊದಗಿದೆ.
ಈ ಬಗ್ಗೆ ಕೇಳಿದರೆ ಕಾಮಗಾರಿಗೆ ಹಣ ಮಂಜೂರು ಆಗಿಲ್ಲ ಹೀಗಾಗಿ ದುರಸ್ತಿ ಕಾರ್ಯ ನೆನೆಗುದಿಗೆ ಬಿದ್ದಿದೆ ಎಂಬ ಉತ್ತರ ಕೇಳಿ ಬರುತ್ತಿದೆ. ಇದನ್ನು ಖಂಡಿಸುವ ಗ್ರಾಮಸ್ಥರು ಕಾಮಗಾರಿ ಮಂಜೂರಾಗದೆ ಕೊಠಡಿಯ ನೆಲಭಾಗವನ್ನು ಯಾವ ಉದ್ದೇಶಕ್ಕಾಗಿ ಕಿತ್ತು ಹಾಕಿದ್ದೀರಾ? ಎಂದು ಪ್ರಶ್ನಿಸುತ್ತಿದ್ದಾರೆ.
ಗ್ರಾಮದಲ್ಲಿ ಸುಮಾರು 3 ಸಾವಿರಕ್ಕೂ ಅಧಿಕ ಜನರು ವಾಸಿಸುತ್ತಿದ್ದು ಹೆಚ್ಚಾಗಿ ಹಿಂದುಳಿದ ವರ್ಗದವರೇ ಇರುವ ಹರತಲೆ ಗ್ರಾಮದಲ್ಲಿ ಪ.ಜಾತಿಯ ವರ್ಗದವರಿಗೆ ಹದಿನೈದು ವರ್ಷಗಳ ಹಿಂದೆ ಗ್ರಾಮಕ್ಕೆ ಅಂಗನವಾಡಿ ಕಟ್ಟಡ ಮಂಜೂರಾಗಿತ್ತು. ದಿನ ನಿತ್ಯ 15ಕ್ಕೂ ಹೆಚ್ಚು ಪುಟ್ಟ ಮಕ್ಕಳು ಅಂಗನವಾಡಿ ಕೇಂದ್ರಕ್ಕೆ ಹಾಜರಾಗುತ್ತಿದ್ದವು.
ಎಲ್ಲವೂ ಚೆನ್ನಾಗಿ ನಡೆಯಿತ್ತಾದರೂ ಕಟ್ಟಡದ ದುರಸ್ತಿ ಕಾರ್ಯಕ್ಕೆ ಕೈ ಹಾಕಿದ್ದೇ ಇವತ್ತು ಮಕ್ಕಳು ಬಯಲಲ್ಲಿ ಕುಳಿತು ಕೊಳ್ಳುವ ಸ್ಥಿತಿಗೆ ಬರುವಂತಾಗಿದೆ. ಇದರ ಹಿಂದೆ ರಾಜಕೀಯ ಉದ್ದೇಶಗಳಿವೆ ಎಂಬ ಆರೋಪ ಗ್ರಾಮದಲ್ಲಿ ಕೇಳಿ ಬರುತ್ತಿದೆ. ಗ್ರಾಮದಲ್ಲಿ ಹಲವಾರು ಸಮಸ್ಯೆಗಳಿದ್ದರೂ ಅದನ್ನು ಪರಿಹರಿಸದೆ ಸುಸ್ಥಿತಿಯಲ್ಲಿದ್ದ ಕಟ್ಟಡದ ದುರಸ್ತಿ ಕಾರ್ಯಕ್ಕೆ ಮುಂದಾಗಿರುವುದು ಏಕೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ದುರಸ್ತಿ ಕಾರ್ಯಕ್ಕೆ ಹಣ ಬಿಡುಗಡೆಯಾಗದ ಕಾರಣ ಕೆಲಸ ನಿರ್ವಹಿಸುತ್ತಿದ್ದ ಗುತ್ತಿಗೆದಾರರು ಕೈಬಿಟ್ಟಿದ್ದಾರೆ. ಇದರಿಂದ ಕಟ್ಟಡದ ಒಳಗೆ ಕೂರಲಾಗದೆ ಮಕ್ಕಳು ಮಳೆ ಗಾಳಿ ಬಿಸಿಲಿಗೆ ಬಯಲಲ್ಲೇ ಆಟವಾಡುತ್ತಿರುತ್ತಾರೆ. ಇದರಿಂದ ಏನಾದರು ತೊಮದರೆ ಆದರೆಯಾರು ಹೊಣೆ? ಎಂಬುದು ಗ್ರಾಮಸ್ಥರ ಪ್ರಶ್ನೆಯಾಗಿದೆ.
ಗ್ರಾಮದಲ್ಲಿ 2011-12ರಲ್ಲಿ ಗ್ರಂಥಾಲಯವನ್ನು ಮಂಜೂರು ಮಾಡಲಾಗಿತ್ತು. ಆದರೆ ಇದುವರೆಗೂ ಆ ಗ್ರಂಥಾಲಯ ಸಾರ್ವಜನಿಕರಿಗೆ, ವಿದ್ಯಾಥರ್ಿಗಳಿಗೆ ಉಪಯೋಗಕ್ಕೆ ಬಾರದೆ ಬರಿ ಕೊಠಡಿಯಾಗಿಯೇ ನಿಂತಿದೆ. ಸದ್ಯಕ್ಕೆ ಮಳೆ ಬಂದರೆ ಈ ಕೊಠಡಿಯೇ ಮಕ್ಕಳಿಗೆ ಆಶ್ರಯವಾಗಿದೆ ಎನ್ನುವ ಗ್ರಾಮದ ಗುರುಸ್ವಾಮಿ, ಯಜಮಾನ್ ಕುಮಾರ್, ನಂಜುಂಡಸ್ವಾಮಿ ಮೊದಲಾದವರು ಇನ್ನು ಮುಂದೆಯಾದರೂ ಸಂಬಂಧಿಸಿದವರು ಇತ್ತ ಗಮನಹರಿಸಿ ಕ್ರಮ ಕೈಗೊಳ್ಳದಿದ್ದಲ್ಲಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.