ಮಡಿಕೇರಿ: ವಿಧಾನ ಪರಿಷತ್ ಗೆ ಕೊಡಗಿನ ಒಂದು ಸ್ಥಾನಕ್ಕೆ ನಡೆಯಲಿರುವ ಚುನಾವಣೆಗೆ ಬಿಜೆಪಿಯಿಂದ ನಾಮಪತ್ರ ಸಲ್ಲಿಸಿದ್ದ ಅಧಿಕೃತ ಅಭ್ಯರ್ಥಿಯ ನಾಮಪತ್ರ ತಿರಸ್ಕೃತಗೊಂಡಿದೆ.
ಆದರೆ ಇದರ ಮುನ್ಸೂಚನೆ ಅರಿತು ಕೊನೆಗಳಿಗೆಯಲ್ಲಿ ಮತ್ತೊಬ್ಬ ಅಭ್ಯರ್ಥಿ ಮೂಲಕ ನಾಮಪತ್ರ ಸಲ್ಲಿಸಿದ್ದರಿಂದ ಬಿಜೆಪಿ ಕಣದಲ್ಲಿ ಉಳಿಯುವಂತಾಗಿದೆ. ಒಬ್ಬರು ಅಧಿಕೃತ ಮತ್ತೊಬ್ಬರು ಡೆಮ್ಮಿ ಹೀಗೆ ಎರಡು ನಾಮಪತ್ರ ಸಲ್ಲಿಕೆಯಾಗಿತ್ತು. ಇದೀಗ ಅಧಿಕೃತ ಅಭ್ಯರ್ಥಿಯ ನಾಮಪತ್ರ ತಿರಸ್ಕೃತಗೊಂಡು ಡೆಮ್ಮಿ ಅಭ್ಯರ್ಥಿಯೇ ಅಧಿಕೃತ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ. ಇವರ ಪರವೇ ಬಿಜೆಪಿ ಪ್ರಚಾರ ಕೈಗೊಂಡಿದೆ.
ಬಿಜೆಪಿ ಅಭ್ಯರ್ಥಿ ಸುಜಾ ಕುಶಾಲಪ್ಪ ಅವರು ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು. ಆದರೆ ಕ್ರಿಮಿನಲ್ ಪ್ರಕರಣವೊಂದರ ಸಂಬಂಧ ನಾಮಪತ್ರ ತಿರಸ್ಕರಿಸುವ ಸಾಧ್ಯತೆಯ ಮುನ್ಸೂಚನೆ ಅರಿತು ಕೊನೆಗಳಿಗೆಯಲ್ಲಿ ಪಕ್ಷದಿಂದ ಸುನಿಲ್ ಸುಬ್ರಮಣಿ ಅವರ ಮೂಲಕ ನಾಮಪತ್ರವನ್ನು ಸಲ್ಲಿಸಲಾಗಿತ್ತು. ಈಗ ಅವರ ಪುರಸ್ಕೃತಗೊಂಡು ಅವರೆ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿದ್ದರೆ, ಬಿಜೆಪಿ ಅಧಿಕೃತ ಅಭ್ಯರ್ಥಿ ಎಂದು ಘೋಷಿತವಾಗಿದ್ದ ಸುಜಾ ಕುಶಾಲಪ್ಪ ಹೊರಗುಳಿಯುವಂತಾಗಿದೆ.
ಸುಜಾ ಕುಶಾಲಪ್ಪ ಅವರ ನಾಮಪತ್ರವನ್ನು ತಿರಸ್ಕರಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಮೀರ್ ಅನೀಸ್ ಅಹಮ್ಮದ್ ಅವರು, ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಸೆಂಟೆನ್ಸ್ ಗೆ ತಡೆಯಾಜ್ಞೆ ಇದೆಯಾದರು ಕನ್ ವಿಕ್ಷನ್ ಚಾಲ್ತಿಯಲ್ಲಿದೆ. ಈ ಹಿನ್ನೆಲೆಯಲ್ಲಿ ಸೆಕ್ಷನ್ 8 ಆಫ್ ಪೀಪಲ್ ರೆಪ್ರಸೆಂಟೇಷನ್ ಆಕ್ಟ್ 1951ರ ಅನ್ವಯ ನಾಮಪತ್ರವನ್ನು ತಿರಸ್ಕರಿಸಲಾಗಿದೆಯೆಂದು ಸ್ಪಷ್ಟ ಪಡಿಸಿದ್ದಾರೆ.