ಮಡಿಕೇರಿ: ಶಾರ್ಟ್ ಸರ್ಕ್ಯೂಟ್ ನಿಂದಾಗಿ ವಿದ್ಯುತ್ ಸ್ಪರ್ಶಗೊಂಡು ಎರಡು ಲೈನ್ ಮನೆಗಳು ಬೆಂಕಿಗಾಹುತಿಯಾದ ಪರಿಣಾಮ ಅಂದಾಜು ಒಂದು ಲಕ್ಷ ರೂ.ಗಳಷ್ಟು ನಷ್ಟ ಸಂಭವಿಸಿರುವ ಘಟನೆ ಕಗ್ಗೋಡ್ಲು ಗ್ರಾಮದಲ್ಲಿ ನಡೆದಿದೆ.
ಮಡಿಕೇರಿ ಸಮೀಪದ ಕಗ್ಗೋಡ್ಲು ಗ್ರಾಮದ ಮಣವಟ್ಟಿರ ಬೋಪಣ್ಣ ಅವರ ತೋಟದ ಲೈನ್ ಮನೆಗಳಿಗೆ ವಿದ್ಯುತ್ ಸ್ಪರ್ಶಗೊಂಡಿದ್ದರಿಂದ ಅಪಾರ ಹಾನಿಯುಂಟಾಗಿದೆಂದು ಮನೆ ಮಾಲೀಕರು ತಿಳಿಸಿದರು.
ಲೈನ್ ಮನೆಯಲ್ಲಿ ವಾಸವಿದ್ದ ಕೂಲಿ ಕಾರ್ಮಿಕರಾದ ರಾಜು ಹಾಗೂ ಕಮಲ ಅವರ ಮನೆಯಲ್ಲಿ ವಿದ್ಯುತ್ ಸ್ಪರ್ಶಗೊಂಡು ಶಾಲಾ ಮಕ್ಕಳ ವಿದ್ಯಾಭ್ಯಾಸಕ್ಕೆ ಸಂಬಂಧಿಸಿದ ದಾಖಲಾತಿಗಳು ಮತ್ತು ಮನೆಯ ಸಾಮಾಗ್ರಿಗಳು ಭಸ್ಮಗೊಂಡು ಸುಮಾರು ಒಂದು ಲಕ್ಷ ರೂ.ಗಳಷ್ಟು ನಷ್ಟವುಂಟಾಗಿದೆ ಎಂದು ತಿಳಿಸಿದೆ.
ಘಟನೆಯಿಂದಾಗಿ ಮನೆಯಲ್ಲಿದ್ದ 12 ಸಾವಿರ ರೂ ಹಣ ಸೇರಿದಂತೆ ನಾನಾ ವಸ್ತುಗಳು ಬೆಂಕಿಯಲ್ಲಿ ಸುಟ್ಟುಹೋಗಿದೆ. ರಾಜು ಹಾಗೂ ಕಮಲ ಎಂದಿನಂತೆ ಕೆಲಸಕ್ಕೆ ತೆರಳಿದ್ದರು. ಮನೆಯಲ್ಲಿ ಬೆಳಗ್ಗೆ ವಿದ್ಯುತ್ ಸ್ಪರ್ಶ ಸಂಭವಿಸಿರುವುದನ್ನು ಗಮನಿಸಿದ ಸ್ಥಳೀಯ ಗ್ರಾಮಸ್ಥರು ಕೂಡಲೇ ಅಗ್ನಿಶಾಮಕ ಇಲಾಖೆಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿದ ಅಗ್ನಿಶಮಕ ಸಿಬ್ಬಂದಿಗಳು ಸ್ಥಳಕ್ಕಾಗಮಿಸಿ ಮನೆಗೆ ಆವರಿಸಿಕೊಂಡ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.