ಚಾಮರಾಜನಗರ: ಕಾಡಂಚಿನಲ್ಲಿ ಆಹಾರ ಅರಸಿ ಬಂದ ಕಾಡಾನೆ ಜಮೀನಿನಲ್ಲಿ ಹಾಯಿಸಲಾಗಿದ್ದ ಅಕ್ರಮ ವಿದ್ಯುತ್ ತಂತಿ ಬೇಲಿಗೆ ಸಿಲುಕಿ ಮೃತಪಟ್ಟಿದ್ದು, ಇದರಿಂದ ಆತಂಕಗೊಂಡ ಜಮೀನಿನ ಮಾಲೀಕ ಆನೆ ದೇಹವನ್ನು ತುಂಡರಿಸಿ ಬಾವಿಗೆ ಎಸೆದಿರುವ ಘಟನೆ ಚಾಮರಾಜನಗರ ಜಿಲ್ಲೆಯಲ್ಲಿ ನಡೆದಿದೆ.
ಅಕ್ರಮ ವಿದ್ಯುತ್ ತಂತಿ ಬೇಲಿಗೆ ಕಾಡಾನೆಯೊಂದು ಸಿಲುಕಿ ಮೃತಪಟ್ಟ ಘಟನೆ ಕೊಳ್ಳೇಗಾಲ ತಾಲೂಕಿನ ಜಾಗೇರಿ ಅರಣ್ಯ ಪ್ರದೇಶದ ಶಿಲುಬೇಪುರದಲ್ಲಿ ನಡೆದಿದ್ದು, ಆನೆ ಮೃತ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಬಾವಿಗೆ ಎಸೆಯಲಾಗಿದೆ. ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನ ಸತ್ತೇಗಾಲ ಸಮೀಪದ ಜಾಗೇರಿ ಅರಣ್ಯ ಪ್ರದೇಶದಂಚಿನಲ್ಲಿರುವ ಶಿಲುಬೇಪುರದ ಚಿನ್ನಪ್ಪಯ್ಯ ಎಂಬ ರೈತ ತಮ್ಮ ಜಮೀನಿನಲ್ಲಿ ಬೆಳೆದ ಫಸಲು ಕಾಡು ಪ್ರಾಣಿಗಳಿಂದ ರಕ್ಷಿಸಿಕೊಳ್ಳಲು ಜಮೀನಿನ ಸುತ್ತ ತಂತಿ ಬೇಲಿ ಹಾಕಿ ಅಕ್ರಮವಾಗಿ ವಿದ್ಯುತ್ ಹರಿಸಿದ್ದನು.
ಕಾಡಿನಿಂದ ಬಂದ ಕಾಡಾನೆ ಆಹಾರಕ್ಕಾಗಿ ಜಮೀನಿಗೆ ಹಾಕಿದ್ದ ಅಕ್ರಮ ವಿದ್ಯುತ್ ತಂತಿ ಬೇಲಿ ಮುರಿಯಲು ಮಂದಾದಾಗ ವಿದ್ಯುತ್ ಹರಿದು ಮೃತಪಟ್ಟಿತು. ವಿಷಯ ತಿಳಿದ ಜಮೀನು ಮಾಲೀಕ ಚಿನ್ನಪ್ಪಯ್ಯ ಕೂಲಿಗಾರರ ಸಹಕಾರದಿಂದ ಆನೆ ಮೃತದೇಹವನ್ನು ತುಂಡರಿಸಿ ಬಾವಿಗೆ ಹಾಕಿದನು.
ವಿದ್ಯುತ್ ತಂತಿ ಬೇಲಿಗೆ ಆನೆ ಮೃತಪಟ್ಟ ವಿಷಯ ತಿಳಿದ ಅರಣ್ಯ ಇಲಾಖೆಯ ಅಧಿಕಾರಿಗಳು ಜಾಗೇರಿ ಬಳಿಯ ಶಿಲುಬೇಪುರಕ್ಕೆ ಧಾವಿಸಿ, ಆರೋಪಿ ಚಿನ್ನಪ್ಪಯ್ಯನನ್ನು ವಶಕ್ಕೆ ತೆಗೆದುಕೊಂಡು ಬಾವಿಯಿಂದ ಆನೆಯ ತುಂಡಾದ ದೇಹವನ್ನು ಹೊರ ತೆಗೆಯುವ ಪ್ರಯತ್ನದಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಗಳು ತೊಡಗಿದ್ದಾರೆ.