ಪಾಂಡವಪುರ: ಕಬಡ್ಡಿ ಆಟವು ಅಪ್ಪಟ ಗ್ರಾಮೀಣ ಕ್ರೀಡೆಯಾಗಿದ್ದು, ಅದನ್ನು ಉಳಿಸಿ ಬೆಳೆಸುವ ಅಗತ್ಯತೆ ಇದೆ ಎಂದು ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ಹೇಳಿದರು.
ತಾಲೂಕಿನ ಕ್ಯಾತನಹಳ್ಳಿ ಗ್ರಾಮದ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ದಿ.ರಾಜೇಗೌಡ ಸ್ಮರಣಾರ್ಥ ಹಾಗೂ ಕ್ಯಾತನಹಳ್ಳಿಯ ಎಲ್ಲಾ ಹಿರಿಯ ಕ್ರೀಡಾ ಸಾಧಕರ ಸವಿನೆನಪಿಗಾಗಿ ಕ್ಯಾತನಹಳ್ಳಿ ಕ್ರೀಡಾ ಬಳಗ ಮತ್ತು ಕ್ರೀಡಾ ಒಕ್ಕೂಟ ಆಯೋಜಿಸಿದ್ದ ಮೈಸೂರು ವಿಭಾಗಮಟ್ಟದ ಹೊನಲು-ಬೆಳಕಿನ ಕಬಡ್ಡಿ ಪಂದ್ಯಾವಳಿಯಲ್ಲಿ ಕ್ರೀಡಾಸಂದೇಶ ನೀಡಿ ಮಾತನಾಡಿದ ಅವರು, ಎಷ್ಟೋ ಕ್ರೀಡಾಪಟುಗಳು ಆರ್ಥಿಕವಾಗಿ ದುರ್ಬಲವಾಗಿರುವ ಕಾರಣ ಕ್ರೀಡಾಪಟುಗಳ ಬೆಳವಣಿಗೆ ಸಾಧ್ಯವಾಗುತ್ತಿಲ್ಲ ಎಂದು ವಿಷಾದಿಸಿದರು.
ಮಾನವ ಶಕ್ತಿ ಹಾಗೂ ಯುವ ಶಕ್ತಿ ಬೆಳೆಯಬೇಕಾದರೆ ಕ್ರೀಡೆ ಅಗತ್ಯ. ಆಟದ ಮೂಲಕ ಜಗತ್ತು ಉಳಿದೆ. ಕ್ರೀಡಾಪಟುಗಳಿಗೆ ಜಾತಿ-ಧರ್ಮ ಗೊತ್ತಿಲ್ಲ. ಕ್ರೀಡಾರಂಗ ಮಾನವ ಧರ್ಮವನ್ನು ಸೃಷ್ಟಿಸಲಿದೆ. ಜೂಜಿನ ಮಾದರಿಯಂತಿರುವ ಕ್ರಿಕೆಟ್ ಗೆ ಹೆಚ್ಚು ಒತ್ತು ಕೊಡುತ್ತಿರುವುದು ಸರಿಯಲ್ಲ. ಐಪಿಎಲ್ ಕ್ರಿಕೆಟ್ ಮೂಲಕ ಬಾಜಿ ಕಟ್ಟುವ ದಂಧೆ ಶುರವಾಗಿದ್ದು, ಇದರಿಂದಾಗಿ ಯುವಕರು ಹಾಳಾಗುತ್ತಿದ್ದಾರೆ. ಆದ್ದರಿಂದ ಐಪಿಎಲ್ ಕ್ರಿಕೆಟ್ ಅನ್ನು ನಿಷೇಧಿಸಬೇಕೆಂದು ಆಗ್ರಹಿಸಿದರು.
ಕ್ರೀಡೆಗೆ ಸರ್ಕಾರ ಕೇವಲ 135 ಕೋಟಿ ರೂ. ನೀಡುತ್ತಿದೆ. ಈ ಹಣ ಯಾವುದಕ್ಕೂ ಸಾಲದು. ಕನಿಷ್ಠ ಕ್ರೀಡೆಗೆ 500 ಕೋಟಿ ರೂ. ಹಣ ನೀಡಿ ಚೀನಾ ದೇಶದ ಮಾದರಿಯಲ್ಲಿ ಕ್ರೀಡಾಪಟುಗಳನ್ನು ದತ್ತು ತೆಗೆದುಕೊಂಡು ಅವರನ್ನು ಪ್ರೋತ್ಸಾಹಿಸಬೇಕು ಎಂದು ಹೇಳಿದರು.
ಜಿ.ಪಂ. ಸದಸ್ಯ ಎ.ಎಲ್.ಕೆಂಪೂಗೌಡ ಕಬಡ್ಡಿ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿ, ತಾಲೂಕಿನಲ್ಲಿ ಕ್ಯಾತನಹಳ್ಳಿ ಅಂದರೆ ಕ್ರೀಡೆ, ಕ್ರೀಡೆ ಎಂದರೆ ಕ್ಯಾತನಹಳ್ಳಿ ಎಂಬರ್ಥವಿದೆ. ಎಲ್ಲರೂ ಕ್ರೀಡೆಯಲ್ಲಿ ಪಾಲ್ಗೊಳ್ಳುವ ಮೂಲಕ ತಮ್ಮ ಆರೋಗ್ಯ ವೃದ್ಧಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಉದ್ಘಾಟನಾ ಪಂದ್ಯದಲ್ಲಿ ಕ್ಯಾತನಹಳ್ಳಿ ಗ್ರಾಮದ ಖೋ-ಖೋ ಬಾಯ್ಸ್ ಮತ್ತು ಕ್ಯಾತನಹಳ್ಳಿ ಜೂನಿಯರ್ ಬಾಯ್ಸ್ ತಂಡಗಳ ನಡುವೆ ಸಣಸಾಟ ನಡೆದು ಕ್ಯಾತನಹಳ್ಳಿ ಜೂನಿಯರ್ಸ್ ತಂಡವು 34-18 ಅಂಕಗಳ ಅಂತರದಿಂದ ಗೆಲುವು ಸಾಧಿಸಿತು.