ಚಾಮರಾಜನಗರ: ಹೈನುಗಾರಿಕೆಯಿಂದ ಜೀವನ ನಿರ್ವಹಣೆ ಮಾಡುತ್ತಿದ್ದ ರೈತರಿಗೆ ಈಗ ಆಂಥ್ರಾಕ್ಸ್ ರೋಗದ ಭಯ ಆರಂಭವಾಗಿದೆ.
ಬೆಲೆ ಕುಸಿತದಿಂದ ಕಂಗಾಲಾಗಿದ್ದ ರೈತರು ಜೀವನ ನಿರ್ವಹಣೆಗಾಗಿ ಸಾಲ ಮಾಡಿ ಹಸುಗಳನ್ನು ಖರೀದಿಸಿ ಹೈನುಗಾರಿಕೆ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಈ ಹಿಂದೆ ಜಾನುವಾರುಗಳನ್ನು ಕಾಲುಬಾಯಿ ಜ್ವರ ಕಾಡಿದ್ದರಿಂದ ಜಾನುವಾರುಗಳು ಸಾವನ್ನಪ್ಪಿದ್ದವು.
ಈ ಬಗ್ಗೆ ಎಚ್ಚೆತ್ತುಕೊಂಡ ಸರ್ಕಾರ ಕಾಲುಬಾಯಿ ಜ್ವರ ತಡೆಗೆ ಕ್ರಮ ಕೈಗೊಂಡಿತ್ತು, ಜಾನುವಾರುಗಳಿಗೆ ಲಸಿಕೆ ಹಾಕುವ ಕಾರ್ಯವನ್ನು ಮಾಡಲಾಗಿತ್ತು. ಇದೀಗ ಕಾಲುಬಾಯಿ ಜ್ವರದಿಂದ ಮುಕ್ತಿ ಹೊಂದಿ ಎಲ್ಲವೂ ಸರಿ ಹೋಯಿತು ಎನ್ನುವಾಗಲೇ ಮತ್ತೊಂದು ಮಹಾಮಾರಿ ಆಂಥ್ರಾಕ್ಸ್ನ ಭಯ ಆರಂಭವಾಗಿದೆ.
ಇದೀಗ ಚಾಮರಾಜನಗರ ಜಿಲ್ಲೆಯ ತೆರಕಣಾಂಬಿಯಲ್ಲಿ ಸುಮಾರು 50ಸಾವಿರ ಬೆಲೆ ಬಾಳುವ ಹಸುವೊಂದು ಸಾವನ್ನಪ್ಪಿದ್ದು, ಇದು ಆಂಥ್ರಾಕ್ಸ್ ರೋಗದಿಂದ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ತೆರಕನಾಂಬಿಯ ಮಹದೇವ ಎಂಬುವರು ಸುಮಾರು 50ಸಾವಿರ ಬೆಲೆ ಬಾಳುವ ಹಸುವನ್ನು ಸಾಕಿದ್ದು ಅದು ಅವರ ಬದುಕಿಗೆ ಆಧಾರವಾಗಿತ್ತು. ಉತ್ತಮವಾಗಿ ಹಾಲು ಕೊಡುತ್ತಿದ್ದ ಹಸು ಇದ್ದಕ್ಕಿದ್ದ ಹಾಗೆ ಸಾವನ್ನಪ್ಪಿದ್ದು ಇದಕ್ಕೆ ಆಂಥ್ರಾಕ್ಸ್ ತಗುಲಿರುವ ಬಗ್ಗೆ ಮಾತುಗಳು ಕೇಳಿ ಬಂದಿವೆ.
ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಪಶು ವೈದ್ಯರು ತೆರಳಿದ್ದು, ಸೋಂಕುವಿನ ಮಾದರಿ ಸಂಗ್ರಹಿಸಿದ್ದು ಮುಂದಿನ ಕ್ರಮ ಕೈಗೊಂಡಿದ್ದಾರೆ. ಅಲ್ಲದೆ ಮುನ್ನೆಚ್ಚರಿಕೆ ಕ್ರಮವಾಗಿ ಇತರೆ ಜಾನುವಾರುಗಳಿಗೆ ಲಸಿಕೆಯನ್ನು ಹಾಕಿದ್ದಾರೆ. ಇದ್ದಕ್ಕಿದ್ದಂತೆ ಹಸು ಸತ್ತಿರುವುದು ಇತರೆ ರೈತರನ್ನು ಕಂಗೆಡಿಸಿದೆ.