ಮಡಿಕೇರಿ: ಕೇಂದ್ರ ಸರ್ಕಾರ ನೋಟುಗಳನ್ನು ರದ್ದುಗೊಳಿಸಿರುವುದನ್ನು ಖಂಡಿಸಿ ಕಾಂಗ್ರೆಸ್ ಆಕ್ರೋಶ್ ದಿನವನ್ನು ಆಚರಿಸಿದರೆ, ಇದಕ್ಕೆ ಪ್ರತಿಯಾಗಿ ಪ್ರಧಾನಿ ನರೇಂದ್ರಮೋದಿ ಅವರ ನಿಲುವನ್ನು ಬೆಂಬಲಿಸಿ ಜಿಲ್ಲಾ ಬಿಜೆಪಿ ‘ಸಂಭ್ರಮ ದಿನ’ವನ್ನು ಆಚರಿಸಿ ನಗರದ ವಿವಿಧ ಬ್ಯಾಂಕ್ ಗಳಲ್ಲಿ ಸಿಹಿ ಹಂಚಿ ಸಂಭ್ರಮಿಸಿತು.
ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಾಲಚಂದ್ರ ಕಳಗಿ, ಕಾರ್ಯದರ್ಶಿ ರವಿ ಬಸಪ್ಪ, ನಗರ ಬಿಜೆಪಿ ಅಧ್ಯಕ್ಷ ಮಹೇಶ್ ಜೈನಿ ಸೇರಿದಂತೆ ಹಲವು ಪ್ರಮುಖರು ಮತ್ತು ಪಕ್ಷದ ಕಾರ್ಯಕರ್ತರು ಸೋಮವಾರ ಬೆಳಗ್ಗೆ ನಗರದ ಕೆನರಾ ಬ್ಯಾಂಕ್, ಪಂಜಾಬ್ ನ್ಯಾಷನಲ್ ಬ್ಯಾಂಕ್ ಸೇರಿದಂತೆ ವಿವಿಧ ಬ್ಯಾಂಕ್ ಗಳಿಗೆ ತೆರಳಿ ಸಿಹಿ ಹಂಚುವ ಮೂಲಕ ಮೋದಿ ಸರ್ಕಾರದ ನಿಲುವನ್ನು ಬೆಂಬಲಿಸಿದರು.
ಪಕ್ಷದ ಪ್ರಮುಖರಾದ ರವಿ ಬಸಪ್ಪ ಸುದ್ದಿಗಾರರೊಂದಿಗೆ ಮಾತನಾಡಿ, ಪ್ರಧಾನಿ ಮೋದಿ ಅವರು 500 ಮತ್ತು 1000 ಮುಖಬೆಲೆೆಯ ನೋಟ್ ಗಳನ್ನು ಅಮಾನ್ಯಗೊಳಿಸಿ ಕಪ್ಪು ಹಣಕ್ಕೆ ತಡೆಯೊಡ್ಡುವ ಮೂಲಕ ರಾಷ್ಟ್ರದ ಪ್ರಗತಿಯ ನಿಟ್ಟಿನಲ್ಲಿ ದಿಟ್ಟ ಹೆಜ್ಜೆಯನ್ನಿಟ್ಟಿದ್ದಾರೆ. ಇಂತಹ ನಿರ್ಧಾರವನ್ನು ಪ್ರತಿಯೊಬ್ಬ ಪ್ರಜೆ ಬೆಂಬಲಿಸುವಂತಾಗಬೇಕೆಂದು ಕರೆ ನೀಡಿದರು.
ಈ ಸಂದರ್ಭ ಪಕ್ಷದ ಪ್ರಮುಖರಾದ ಕೆ.ಎಸ್. ರಮೇಶ್, ಜಗದೀಶ್, ಅರುಣ್ ಕುಮಾರ್ ಬಿ.ಕೆ, ಉಮೇಶ್ ಸುಬ್ರಮಣಿ, ತಳೂರು ಕಿಶೋರ್ ಕುಮಾರ್ ಮೊದಲಾದವರಿದ್ದರು.