ಕನಕಪುರ: ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತ ನಿಧನರಾದ ಹಿನ್ನೆಲೆಯಲ್ಲಿ ಕನಕಪುರ ತಾಲೂಕಿನ ತಮಿಳುನಾಡು ಗಡಿ ಭಾಗಗಳಾದ ಕಾಡುಶಿವನಹಳ್ಳಿ, ಸರಹದ್ದಿನದೊಡ್ಡಿ ಮತ್ತು ಕೊಳಗೊಂಡನಹಳ್ಳಿ, ಹಾಗೂ ಮರಳವಾಡಿ ಹೋಬಳಿಯ ದೊಡ್ಡೂರು ಗ್ರಾಮಗಳ ಬಳಿ ಪೊಲೀಸರು ಚೆಕ್ ಪೋಸ್ಟ್ ಗಳನ್ನು ನಿರ್ಮಿಸಿ ಬಂದೋಬಸ್ತ್ ಮಾಡಿದ್ದರು.
ಕನಕಪುರದಿಂದ ತಮಿಳುನಾಡು ಕಡೆಗೆ ಮತ್ತು ತಮಿಳುನಾಡು ಕಡೆಯಿಂದ ಕನಕಪುರಕ್ಕೆ ಬರುವ ಮತ್ತು ಹೋಗುವ ಎಲ್ಲಾ ವಾಹನಗಳ ತೀವ್ರ ತಪಾಸಣೆ ಮಾಡುತ್ತಿದ್ದು, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಕಟ್ಟೆಚ್ಚರ ವಹಿಸಲಾಗಿದೆ. ಕನಕಪುರದಿಂದ ತಮಿಳುನಾಡಿಗೆ ಹೋಗುತ್ತಿದ್ದ ಎಲ್ಲಾ ಸರ್ಕಾರಿ ಬಸ್ಸುಗಳ ಸಂಚಾರವನ್ನು ನಿಷೇಧಿಸಲಾಗಿದ್ದು, ಬಸ್ ಗಳಿಗೆ ಕಲ್ಲು ಹೊಡೆಯುವುದು ಮತ್ತು ಇತರ ಘಟನೆಗಳು ಸಂಭವಿಸದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಕೋಡಿಹಳ್ಳಿ ಎಸೈ ಪ್ರದೀಪ್ ಮತ್ತು ಹಾರೋಹಳ್ಳಿ ಎಸೈ ಅನಂತರಾಮ್ ತಮ್ಮ ಗಡಿಭಾಗಗಳಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಏರ್ಪಡಿಸಿದ್ದಾರೆ.