ಕೊಡಗು: ಕೊಡಗಿನ ಕೆಲವೆಡೆ ಕೆಲಸಕ್ಕೆ ಕಾರ್ಮಿಕರು ಸಿಗದ ಪರಿಸ್ಥಿತಿ ನಿರ್ಮಾಣವಾಗಿರುವುದರಿಂದ ದೂರದ ಅಸ್ಸಾಂನಿಂದ ಆಗಮಿಸುವ ವಲಸಿಗರ ಸಂಖ್ಯೆಯು ದಿನದಿದ ದಿನಕ್ಕೆ ಬೆಳೆಯುತ್ತಾ ಹೋಗುತ್ತಿದೆ.
ಈ ನಡುವೆ ಬೆಳೆಗಾರರು ಕಾರ್ಮಿಕರ ಬಗ್ಗೆ ಮಾಹಿತಿ ಪಡೆಯದೆ ಕೆಲಸ ನೀಡುತ್ತಿರುವುದು ಕಂಡು ಬರುತ್ತಿದೆ. ಇದು ಮುಂದೊಂದು ದಿನ ಕೊಡಗಿನ ಜನಕ್ಕೆ ಮಾರಕವಾಗಿ ಪರಿಣಮಿಸಿದರೂ ಅಚ್ಚರಿ ಪಡಬೇಕಾಗಿಲ್ಲ. ಅತ್ಯಧಿಕ ಸಂಖ್ಯೆಯಲ್ಲಿ ಕಾರ್ಮಿಕರು ಜಿಲ್ಲೆಗೆ ಹೊರ ರಾಜ್ಯಗಳಿಂದ ವಲಸೆ ಬರುತ್ತಿರುವುದರಿಂದಾಗಿ ಸ್ಥಳೀಯ ಕಾರ್ಮಿಕರಿಗೆ ಕೆಲಸವಿಲ್ಲದ ಪರಿಸ್ಥಿತಿ ಎದುರಾಗಿದೆ ಎಂಬ ಆರೋಪವೂ ಕೇಳಿ ಬರತೊಡಗಿದೆ.
ಜಿಲ್ಲೆಯಲ್ಲಿ ಇದೀಗ ಕಾಫಿ ಕೊಯ್ಲಿನ ಕೆಲಸ ಆರಂಭವಾಗಿದ್ದು, ಇದರಿಂದ ಕೂಲಿ ಕಾರ್ಮಿಕರ ಸಮಸ್ಯೆ ಎದುರಾಗಿರುವ ಕಾರಣದಿಂದ ಕಾಫಿ ತೋಟಗಳ ಮಾಲೀಕರು ವಲಸಿಗರನ್ನು ಕೆಲಸಕ್ಕೆ ತೆಗೆದುಕೊಳ್ಳಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದೆ. ಅಸ್ಸಾಂ ಕಾರ್ಮಿಕರನ್ನು ಕೆಲವು ಗುತ್ತಿಗೆದಾರರು ಕೊಡಗು ಜಿಲ್ಲೆಯ ವಿವಿಧೆಡೆಯ ಕಾಫಿತೋಟಗಳಿಗೆ ಕರೆದು ತರುತ್ತಿದ್ದಾರೆ. ಅಸ್ಸಾಂ ಕಾರ್ಮಿಕರ ಕೂಲಿ ವೆಚ್ಚ ಕಡಿಮೆ ಇರುವುದರಿಂದ ಕೆಲವು ಕಾಫಿ ತೋಟದ ಮಾಲೀಕರು ತೋಟದ ಲೈನ್ ಮನೆಗಳಲ್ಲಿ ಅವರಿಗೆ ವಾಸ್ತವ್ಯ ಕಲ್ಪಿಸಿ ಕೆಲಸ ನೀಡುತ್ತಿದ್ದಾರೆ. ದಿನಕ್ಕೆ ಅಂದಾಜು 100ರಿಂದ200 ರೂ. ಮಾತ್ರ ಅಸ್ಸಾಂ ಕಾರ್ಮಿಕರಿಗೆ ವೇತನ ನೀಡಲಾಗುತ್ತಿದೆ. ಆದರೆ ಸ್ಥಳೀಯರಿಗೆ 200-300ರೂ. ಕೂಲಿ ನೀಡಬೇಕಾಗುತ್ತಿರುವುದರಿಂದ ಸ್ಥಳೀಯರನ್ನು ಕೆಲವು ಮಾಲೀಕರು ಕಡೆಗಣಿಸುತ್ತಿದ್ದಾರೆ. ಇನ್ನು ಕೆಲವು ಖಾಸಗಿ ಒಡೆತನದ ಕಾಫಿ ತೋಟಗಳಲ್ಲಿ ಸ್ಥಳೀಯರಿಗೆ ವಾರದಲ್ಲಿ ಮೂರು ದಿನ ಮಾತ್ರ ಕೆಲಸ ನೀಡಲಾಗುತ್ತಿದೆ. ಅಸ್ಸಾಂ ಕಾರ್ಮಿಕರಿಗೆ ವಾರವಿಡೀ ಕೆಲಸವನ್ನು ನೀಡುತ್ತಿದ್ದಾರೆ.
ಚಿಕ್ಕ ಮಕ್ಕಳಿಂದ ಹಿಡಿದು ವೃದ್ದರವರೆಗೂ ಅಸ್ಸಾಂನಿಂದ ಗಂಟುಮೂಟೆ ಕಟ್ಟಿಕೊಂಡು ಜಿಲ್ಲೆಗೆ ಆಗಮಿಸುತ್ತಿರುವುದು ಇತ್ತೀಚೆಗೆ ಸಾಮಾನ್ಯವಾಗಿದೆ. 50 ಮಂದಿ ಜನರ ತಂಡ ಗುಂಪು ಗುಂಪಾಗಿ ಬಸ್ ನಲ್ಲಿ ಆಗಮಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಅಂದಾಜು 30 ಸಾವಿರಕ್ಕೂ ಅಧಿಕ ಅಸ್ಸಾಂ ಹಾಗೂ ಇತರೆ ವಲಸಿಗರಿದ್ದಾರೆ ಎಂದು ಅಂದಾಜಿಸಲಾಗಿದೆ.
ಅಸ್ಸಾಂ ಹಾಗೂ ಮತ್ತಿತರ ಕಡೆಗಳಿಂದ ಜನರನ್ನು ಗುತ್ತಿಗೆದಾರರು ಕೊಡಗಿಗೆ ತಂದು ಬಿಡುತ್ತಿದ್ದು, ಇದೀಗ ಅದು ದಂಧೆಯಾಗಿ ಪರಿಣಮಿಸ ತೊಡಗಿದೆ. ಇದರಿಂದ ಸ್ಥಳೀಯ ಕೂಲಿ ಕಾರ್ಮಿಕರಿಗೆ ಭಾರಿ ಪೆಟ್ಟು ಬಿದ್ದಿದೆ. ಜಿಲ್ಲಾ ಪೊಲೀಸ್ ಇಲಾಖೆಯ ಪ್ರಕಾರ ಕೊಡಗು ಜಿಲ್ಲೆಯಲ್ಲಿ ಅಂದಾಜು 8,000ಕ್ಕೂ ಅಧಿಕ ಅಸ್ಸಾಂ ಕಾರ್ಮಿಕರು ದುಡಿಯುತ್ತಿದ್ದಾರೆ. ಈ ಬಗ್ಗೆ ಸಂಬಂಧಿಸಿದ ತೋಟದ ಮಾಲೀಕರು ಸೂಕ್ತ ಮಾಹಿತಿ ನೀಡುವಂತೆ ಪೊಲೀಸ್ ಇಲಾಖೆ ಸೂಚನೆ ನೀಡಿದೆ.
ಅಸ್ಸಾಮಿಗರ ಬಗ್ಗೆ ನಿಗಾ ವಹಿಸುವ ನಿಟ್ಟಿನಲ್ಲಿ ಸಂಬಂಧಿಸಿದ ಕಾಫಿ ಕಾಫಿ ತೋಟದ ಮಾಲೀಕರಿಗೆ ತಮ್ಮ ತೋಟಗಳಲ್ಲಿ ನೆಲೆಸಿರುವ ಕಾರ್ಮಿಕರ ಬಗ್ಗೆ ಮಾಹಿತಿ ಹಾಗೂ ದಾಖಲೆಗಳನ್ನು ನೀಡುವಂತೆ ಎಸ್ಪಿ ರಾಜೇಂದ್ರ ಪ್ರಸಾದ್ ಅವರು ತೋಟದ ಮಾಲೀಕರಿಗೆ ಸೂಚನೆ ನೀಡಿದ್ದಾರೆ. ಆದರೆ ಗುತ್ತಿಗೆ ಆಧಾರದಲ್ಲಿ ಕರೆ ತರುತ್ತಿರುವುದರಿಂದ ಮಾಲೀಕರು ತಲೆ ಕೆಡಿಸಿಕೊಳ್ಳುತ್ತಿಲ್ಲ. ಇನ್ನಾದರೂ ಹೊರಗಿನವರಿಗೆ ಕೆಲಸ ನೀಡುವ ಮುನ್ನ ಮಾಲೀಕರು ಸಮರ್ಪಕ ಮಾಹಿತಿ ನೀಡಿ ಕೆಲಸ ನೀಡುವ ಅಗತ್ಯವಿದೆ. ತಪ್ಪಿದಲ್ಲಿ ಸಮಸ್ಯೆಗಳು ಎದುರಾಗುವ ಸಾಧ್ಯತೆಯಿದೆ.