ರಾಮನಗರ: ವಿವಾಹದ ಬಳಿಕ ಸಿಕ್ಕಿದ ಮಾಜಿ ಪ್ರಿಯಕರನನ್ನು ಸೇರಲು ಅಡ್ಡಿಯಾಗಿದ್ದ ಪತಿಗೆ ಪತ್ನಿಯೇ ಪ್ರಿಯಕರನೊಂದಿಗೆ ಸೇರು ಸೈಯನೆಡ್ ಇಂಜೆಕ್ಷನ್ ನೀಡಿ ಕೊಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಕುಂಬಳಗೋಡು ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮೂಲತಃ ತಮಿಳುನಾಡಿನವರಾಗಿದ್ದು, ಕೆಂಗೇರಿ ಉಪನಗರದ ರೈಲ್ವೆ ಪ್ಯಾರಲಲ್ ರಸ್ತೆ ಬಳಿ ವಾಸವಿದ್ದ ರವಿಕುಮಾರ್(42) ಎಂಬಾತನ ಪತ್ನಿ ನಾಗಜ್ಯೋತಿ ಪ್ರಮುಖ ಆರೋಪಿಯಾಗಿದ್ದು, ಈಕೆಯೊಂದಿಗೆ ಪ್ರಿಯಕರ ರಾಮಕುಮಾರ ಹಾಗೂ ಕೃತ್ಯಕ್ಕೆ ಸಹಕರಿಸಿದ ಭಾಸ್ಕರ್ ಹಾಗೂ ಟಿ.ರಾಮಕುಮಾರ್ ಎಂಬುವರನು ಬಂಧಿಸಲಾಗಿದೆ. ಪೊಲೀಸರು ಬಂಧಿತರಿಂದ ಕೃತ್ಯಕ್ಕೆ ಬಳಸಿದ್ದ ಕಾರು, ಲ್ಯಾಪ್ಟಾಪ್ ಹಾಗೂ ಮೊಬೈಲ್ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ತಮಿಳುನಾಡು ಮೂಲದ ರವಿಕುಮಾರ್ ಮತ್ತು ನಾಗಜ್ಯೋತಿ ಅವರಿಗೆ 13 ವರ್ಷದ ಹಿಂದೆ ವಿವಾಹವಾಗಿತ್ತು, ಈ ದಂಪತಿಗಳಿಗೆ 2 ಮಕ್ಕಳಿದ್ದಾರೆ. ಮೃತ ರವಿಕುಮಾರ್ ದಂಪತಿಗಳು ಅ.21ರಂದು ಚಳ್ಳಘಟ್ಟ ಸಮೀಪದ ಹುಣಸೇಮರದ ಪಾಳ್ಯದಲ್ಲಿರುವ ಸಾಯಿಬಾಬಾ ದೇವಸ್ಥಾನಕ್ಕೆ ತೆರಳಿ ಕಾರಿನಲ್ಲಿ ವಾಪಾಸಾಗುತ್ತಿದ್ದ ವೇಳೆ ನೈಸ್ರಸ್ತೆಯ ಬ್ರಿಡ್ಜ್ ಬಳಿಯಿದ್ದ ಗಿಡವೊಂದರ ರೆಂಬೆಗಳನ್ನು ಪೂಜೆಗಾಗಿ ಕಿತ್ತುಕೊಳ್ಳುವಂತೆ ಪತ್ನಿ ನಾಗಜ್ಯೋತಿ ತಿಳಿಸಿದ್ದರಿಂದ ವಾಹನದಿಂದ ಕೆಳಗೆ ಇಳಿದು ಪತ್ನಿಯ ಮಾತಿನಂತೆ ರೆಂಬೆಗಳನ್ನು ಕೀಳುತ್ತಿದ್ದಾಗ ಹಿಂದಿನಿಂದ ಬಂದ ಇಬ್ಬರು ಅಪರಿಚಿತರು ಸೈನೈಡ್ ಇಂಜೆಕ್ಷನ್ ಚುಚ್ಚಿ ಪರಾರಿಯಾಗಿದ್ದರು.
ನಂತರ ಕಾರನ್ನು ತಾವೇ ಚಾಲನೆ ಮಾಡಿಕೊಂಡು ಮನೆಗೆ ಬಂದ ರವಿಕುಮಾರ್ ಘಟನೆಯನ್ನು ತನ್ನ ತಾಯಿಗೆ ವಿವರಿಸಿ ಕುಸಿದು ಬಿದ್ದಿದ್ದರು. ತೀವ್ರ ಅಸ್ವಸ್ಥಗೊಂಡಿದ್ದ ರವಿಕುಮಾರ್ ನನ್ನು ತಕ್ಷಣವೇ ಬಿಜಿಎಸ್ ಆಸ್ಪತ್ರೆಗೆ ದಾಖಲಿಸಿದರೂ ಸಹ ಚಿಕಿತ್ಸೆ ಫಲಕಾರಿಯಾಗದೆ ಅ.21ರಂದು ಮೃತಪಟ್ಟಿದ್ದರು. ಈ ಬಗ್ಗೆ ತನಿಖೆ ನಡೆಸುವಂತೆ ಮೃತನ ತಾಯಿ ಸುಶೀಲಮ್ಮ ಪೊಲೀಸರಿಗೆ ದೂರು ಸಲ್ಲಿಸಿದ್ದರು.
ತನಿಖೆ ಕೈಗೆತ್ತಿಕೊಂಡ ಪೊಲೀಸರು ಘಟನೆಯ ಬಗ್ಗೆ ನಾಗಜ್ಯೋತಿಯನ್ನು ವಿಚಾರಣೆ ನಡೆಸಿದಾಗ ಒಂದೊಂದು ಬಾರಿ ಒಂದೊಂದು ರೀತಿಯ ಹೇಳಿಕೆಗಳನ್ನು ನೀಡಿದ್ದರಿಂದ ಅನುಮಾನಗೊಂಡು ಪೊಲೀಸರು, ತೀವ್ರ ವಿಚಾರಣೆಗೆ ಒಳಪಡಿಸಿದಾಗ ಸತ್ಯ ಹೊರ ಬಿದ್ದಿದೆ, ತನ್ನ ಪ್ರಿಯಕರ ರಾಮಕುಮಾರ ಎಂಬಾತನ ಜತೆ ಸೇರಿ ಕೊಲೆ ಮಾಡಲು ಸಂಚು ರೂಪಿಸಿದ್ದಾಗಿ ಹೇಳಿರುವ ನಾಗಜ್ಯೋತಿ, ರಾಮಕುಮಾರ್ ಜತೆ ಹೊಂದಿದ್ದ ಪ್ರೇಮಾಂಕುರವೇ ಕೊಲೆಗೆ ಪ್ರಮುಖ ಕಾರಣ ಎಂದು ವಿಚಾರಣೆ ವೇಳೆ ತಿಳಿಸಿದ್ದಾಳೆ.
ತಮಿಳುನಾಡಿನ ಕಾರಿಮಂಗಳಮ್ ಎಂಬ ಊರಿನವರಾದ ಆರೋಪಿ ರಾಮಕುಮಾರ್ ಹಾಗೂ ನಾಗಜ್ಯೋತಿ ಶಾಲಾ ದಿನಗಳಲ್ಲಿ ಸಹಪಾಠಿಗಳಾಗಿದ್ದು, ಪರಸ್ಪರ ಪ್ರೀತಿಸುತ್ತಿದ್ದರು. ಆದರೆ, ಪ್ರೀತಿಗೆ ಹಿರಿಯರಿಂದ ವಿರೋಧ ವ್ಯಕ್ತವಾಗಿ ನಾಗಜ್ಯೋತಿಯನ್ನು ರವಿಕುಮಾರನೊಂದಿಗೆ ವಿವಾಹ ಮಾಡಿದ್ದರು. ನಂತರ ರಾಮ್ ಕುಮಾರ್ ಕೂಡ ಬೇರೆ ಕಡೆ ಮದುವೆಯಾಗಿದ್ದನು. ಆದರೆ, ರಾಮ್ ಕುಮಾರ್ ದಂಪತಿ ನಡುವೆ ವಿರಸ ಉಂಟಾದ ಕಾರಣ ಇಬ್ಬರೂ ದೂರವಾಗಿದ್ದರು.
ಪತ್ನಿಯಿಂದ ದೂರವಾಗಿ ಒಂಟಿಯಾಗಿದ್ದ ಆರೋಪಿ ರಾಮ್ ಕುಮಾರ್ ಫೇಸ್ ಬುಕ್ ಮೂಲಕ ಮತ್ತೆ ನಾಗಜ್ಯೋತಿಯ ಸಂಪರ್ಕ ಸಾಧಿಸಿ, ಮೊಬೈಲ್ ನಂಬರ್ ವಿನಿಮಯ ಮಾಡಿಕೊಂಡು ಮಾತುಕತೆ ಶುರುವಿಟ್ಟುಕೊಂಡಿದ್ದಾನೆ. ಪತಿ ಹಾಗೂ ಕುಟುಂಬದವರಿಗೆ ಅನುಮಾನ ಬಾರದಂತೆ ಇವರಿಬ್ಬರೂ ಗೌಪ್ಯವಾಗಿ ಸಂಬಂಧ ಮುಂದುವರಿಸಿದ್ದರು, ಇಬ್ಬರೂ ಮತ್ತೆ ಒಂದಾಗಲು ಪತಿ ರವಿಕುಮಾರ್ ಅಡ್ಡಿಯಾಗಿದ್ದನೆಂದು ನಾಗಜ್ಯೋತಿ ತನ್ನ ಪತಿ ರವಿಕುಮಾರ್ ನನ್ನೆ ಹತ್ಯೆ ಮಾಡಲು ಪ್ರಿಯಕರ ಜೊತೆ ಸೇರಿ ಸಂಚು ರೂಪಿಸಿದ್ದಳು.
ಈ ಮೊದಲು ಒಮ್ಮೆ ಹತ್ಯೆಯ ಯತ್ನ ವಿಫಲವಾಗಿದ್ದು, ಅಪಘಾತದ ಮೂಲಕ ಕೊಲೆ ಮಾಡಲು ಸಂಚು ರೂಪಿಸಿ ನಾಗಜ್ಯೋತಿ ತಮಿಳುನಾಡಿನ ಕೃಷ್ಣಗಿರಿಗೆ ತನ್ನ ಗಂಡನನ್ನು ಕರೆದುಕೊಂಡು ಹೋಗಿದ್ದಳು. ಅಲ್ಲಿ ನಡೆದ ಅಪಘಾತದಲ್ಲಿ ರವಿಕುಮಾರ್ ಕಾಲಿಗೆ ಪೆಟ್ಟು ಮಾಡಿಕೊಂಡು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದರು, ಈ ವಿಚಾರ ಯಾವುದಾದರೊಂದು ದಿನ ಪತಿಗೆ ತಿಳಿಯಬಹುದೆಂಬ ಭಯದಿಂದ ರವಿಕುಮಾರ್ ಹತ್ಯೆ ಮಾಡಲು ಯೋಜನೆ ಹಾಕಿಕೊಂಡಿದ್ದರು.
ಪದವೀಧರನಾಗಿದ್ದ ಆರೋಪಿ ರಾಮಕುಮಾರ್ ಪೊಲೀಸರಿಗೆ ಸಾಕ್ಷಾಧಾರ ದೊರೆಯದಂತೆ ಚಾಣಾಕ್ಷತನದಿಂದ ಕೊಲೆ ಮಾಡಲು ಇಂಟರ್ನೆಟ್ ನಲ್ಲಿ ಸರ್ಚ್ ಮಾಡಿದ್ದಾನೆ. ಚಿನ್ನದ ಕೆಲಸಕ್ಕೆ ಬಳಸುವ ಸೋಡಿಯಂ ಸೈಯನೆಡನ್ನು ಇಂಜೆಕ್ಷನ್ ಮೂಲಕ ಚುಚ್ಚಿದರೆ ಸ್ಥಳದಲ್ಲೇ ಸಾವನ್ನಪ್ಪುತ್ತಾರೆ ಎಂಬುದನ್ನು ಖಚಿತಪಡಿಸಿಕೊಂಡು ತನ್ನ ಫಾರ್ಮಾಸಿಸ್ಟ್ ಸ್ನೇಹಿತರ ಬಳಿ ಚಿನ್ನ ಪರೀಕ್ಷಿಸಬೇಕೆಂದು ಸುಳ್ಳು ಹೇಳಿ ಸೈಯನೆಡನ್ನು ಪಡೆದು ರವಿಕುಮಾರನನ್ನು ಮುಗಿಸಲು ಸ್ಕೆಚ್ ರೂಪಿಸಿದ್ದಾರೆ.
ಪೂರ್ವ ನಿಯೋಜಿತ ಸಂಚಿನಂತೆ ಅ.20ರಂದು ಸಾಯಿಬಾಬಾ ದೇವಸ್ಥಾನಕ್ಕೆ ಹೋಗಿ ವಾಪಸ್ ಬರುವಾಗ ಕೃತ್ಯ ನಡೆಸಿದ್ದಾರೆ, ರವಿಕುಮಾರ್ ಮನೆಗೆ ತೆರಳಿ ತನ್ನ ತಾಯಿಯ ಬಳಿ ಇಂಜೆಕ್ಷನ್ ನೀಡಿದ ವಿಷಯ ತಿಳಿಸಿ ಮೃತಪಟ್ಟಿದ್ದರಿಂದ ಅನುಮಾನಗೊಂಡ ಸುಶೀಲಮ್ಮ ದೂರು ನೀಡಿದ್ದರು, ಪ್ರಕರಣದ ಬೆನ್ನತ್ತಿದ ಪೊಲೀಸರು ನಡೆಸಿದ ತನಿಖೆಯಿಂದ ನಾಗಜ್ಯೋತಿಯ ನೀಚ ಕೃತ್ಯ ಬೆಳಕಿಗೆ ಬಂದಿದೆ.