ಮಡಿಕೇರಿ: ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗಿದ್ದು, ಜಿಲ್ಲೆಯಲ್ಲಿ ನಿರಂತರವಾಗಿ ಶಾಂತಿ ಕದಡಲು ಯತ್ನಿಸುತ್ತಿದೆ ಎಂದು ಆರೋಪಿಸಿರುವ ಕೊಡಗು ಸೌಹಾರ್ದ ವೇದಿಕೆಯ ಪ್ರಮುಖ ಹಾಗೂ ವಿಧಾನ ಪರಿಷತ್ ಮಾಜಿ ಸದಸ್ಯ ಎ.ಕೆ.ಸುಬ್ಬಯ್ಯ ಸಂಘಟನೆ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿರುವುದಾಗಿ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸಿಎನ್ಸಿ ಸಂಘಟನೆಯ ಸ್ವಯಂ ಘೋಷಿತ ಅಧ್ಯಕ್ಷರಾದ ಎನ್.ಯು.ನಾಚಪ್ಪ ಕೊಡವರ ಮಾನ ಹರಾಜು ಹಾಕುತ್ತಿದ್ದಾರೆ ಎಂದು ಆರೋಪಿಸಿದರು. ಸಂಘಟನೆ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಹಿಂದೂ, ಮುಸ್ಲಿಂ, ಆದಿವಾಸಿ, ಕೊಡವ, ಅರೆಭಾಷಾ ಗೌಡ, ಒಕ್ಕಲಿಗ ಸೇರಿದಂತೆ ವಿವಿಧ ಸಮುದಾಯಗಳ ಸುಮಾರು 90 ಮಂದಿ ಮುಖಂಡರು ಸಹಿ ಮಾಡಿರುವ ಮನವಿ ಪತ್ರವನ್ನು ಮುಖ್ಯಮಂತ್ರಿಗಳಿಗೆ ನೀಡಲಾಗಿದೆ ಎಂದರು.
ಕೊಡವ ಲ್ಯಾಂಡ್ ಬೇಡಿಕೆಯನ್ನು ಮುಂದಿಟ್ಟುಕೊಂಡು ಹೋರಾಟ ನಡೆಸುತ್ತಿದ್ದ ಸಿಎನ್ಸಿ ಇದೀಗ ದಿಢೀರ್ ಆಗಿ ಕೊಡವರನ್ನು ಬುಡಕಟ್ಟು ಜನಾಂಗವೆಂದು ಘೋಷಿಸುವಂತೆ ಒತ್ತಾಯಿಸುತ್ತಿರುವುದು ಯಾಕೆ ಎಂದು ಸುಬ್ಬಯ್ಯ ಪ್ರಶ್ನಿಸಿದರು. ಕೊಡವರನ್ನು ಬುಡಕಟ್ಟು ಜನಾಂಗವೆಂದು ಪರಿಗಣಿಸಬೇಕೆನ್ನುವ ಸಂಘಟನೆಯ ಬೇಡಿಕೆಯಂತೆ ಜಿಲ್ಲೆಯಲ್ಲಿ ಅಧ್ಯಯನ ಆರಂಭವಾಗಿದ್ದು, ಇದು ಕೊಡವ ಜನಾಂಗಕ್ಕೆ ಆಗುತ್ತಿರುವ ಅಪಮಾನವಾಗಿದೆ. ಜಿಲ್ಲೆಯ ಮೂಲನಿವಾಸಿಗಳದ ಆದಿವಾಸಿಗಳು ಬುಡಕಟ್ಟು ಜನಾಂಗವೇ ಹೊರತು ಕೊಡವರಲ್ಲವೆಂದು ಅಭಿಪ್ರಾಯಪಟ್ಟ ಸುಬ್ಬಯ್ಯ ಹೆಚ್ಚಿನ ಸಂಖ್ಯೆಯಲ್ಲಿ ಬುಡಕಟ್ಟು ಜನರಿರುವುದರಿಂದ ಕೊಡಗನ್ನು ಬುಡಕಟ್ಟು ಏರಿಯಾ ಎಂದು ಗುರುತಿಸಿ ಅಭಿವೃದ್ಧಿಗಾಗಿ ವಿಶೇಷ ಪ್ಯಾಕೇಜ್ನ್ನು ಪಡೆಯಲು ಅವಕಾಶವಿದೆ ಎಂದರು.
ಮುಖ್ಯಮಂತ್ರಿಗಳ ಅರಿವಿಗೆ ಬಾರದೆ ಬುಡಕಟ್ಟು ಬೇಡಿಕೆಗೆ ಸಂಬಂಧಿಸಿದಂತೆ ಕೊಡವರ ಅಧ್ಯಯನ ನಡೆಯುತ್ತಿದ್ದು, ಸರಕಾರದ ಹಣ ಪೋಲಾಗುತ್ತಿದೆ. ಹೊಟ್ಟೆಪಾಡಿಗಾಗಿ ಸಿಎನ್ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಕೊಡವರ ಮಾನವನ್ನು ಹರಾಜು ಹಾಕುತ್ತಿದ್ದಾರೆ ಎಂದು ಆರೋಪಿಸಿದ ಅವರು ಇದಕ್ಕೆ ಕೊಡಗು ಸೌಹಾರ್ದ ವೇದಿಕೆ ಅವಕಾಶ ನೀಡುವುದಿಲ್ಲವೆಂದು ಎಚ್ಚರಿಕೆ ನೀಡಿದರು.
ದೇಶದ ಎಲ್ಲಾ ಕ್ಷೇತ್ರಗಳಲ್ಲಿ ಕೊಡವರಿಗೆ ವಿಶೇಷ ಸ್ಥಾನಮಾನ, ಗೌರವವಿದೆ. ಆದರೆ ಸಿಎನ್ಸಿ ಸಂಘಟನೆ ಸಮಾಜದ ಸ್ವಾಸ್ಥ್ಯ ಕೆಡಿಸುವ ಮೂಲಕ ಕೊಡವರ ಗೌರವಕ್ಕೆ ದಕ್ಕೆ ತರುತ್ತಿದೆ ಎಂದು ಆರೋಪಿಸಿದರು. ಸೌಹಾರ್ದ ವೇದಿಕೆ ವತಿಯಿಂದ ಸಿಎನ್ಸಿ ವಿರುದ್ಧ ಜನಜಾಗೃತಿ ರ್ಯಾಲಿಗಳನ್ನು ನಡೆಸಿ ಕೊಡವರ ಘನತೆಯನ್ನು ಉಳಿಸಲು ಹೋರಾಟ ನಡೆಸಲಾಗುವುದೆಂದು ಸುಬ್ಬಯ್ಯ ತಿಳಿಸಿದರು.
ಎನ್.ಯು.ನಾಚಪ್ಪ ಅವರ ಎಲ್ಲಾ ಚಟುವಟಿಕೆಗಳ ಬಗ್ಗೆ ತನಿಖೆ ನಡೆಸಬೇಕು, ಸಂಘಟನೆಯ ಆದಾಯದ ಮೂಲವನ್ನು ಕಂಡು ಹಿಡಿಯಬೇಕು, ಲೆಕ್ಕಪತ್ರಗಳಿಲ್ಲದೆ ಸಂಘಟನೆ ಸಂಗ್ರಹಿಸಿಟ್ಟಿರುವ ಹಣವನ್ನು ರಾಜ್ಯ ಸರಕಾರ ಮುಟ್ಟುಗೋಲು ಹಾಕಿಕೊಳ್ಳಬೇಕು, ದೇಶ ದ್ರೋಹದ ಆರೋಪದಡಿ ಎನ್.ಯು.ನಾಚಪ್ಪ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಬೇಕು, ಆಂತರಿಕ ವಿಚಾರಗಳನ್ನು ಅಂತರರಾಷ್ಟ್ರೀಯ ವೇದಿಕೆಯಾದ ಯುಎನ್ಓ ಗೆ ಕೊಂಡೊಯ್ದಿರುವುದನ್ನು ದೇಶದ್ರೋಹವೆಂದು ಪರಿಗಣಿಸಬೇಕು, ಬೇನಾಮಿ ಹೆಸರಿನಲ್ಲಿ ಪತ್ರ ಬರೆಯುವ ಮತ್ತು ಮನವಿ ಸಲ್ಲಿಸುವ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಇದರ ಹಿಂದಿನ ಉದ್ದೇಶವನ್ನು ಪತ್ತೆ ಹಚ್ಚಬೇಕು, ಸಿಎನ್ಸಿ ಸಂಘಟನೆಯನ್ನು ನಿಷೇಧಿಸಿ ಎನ್.ಯು.ನಾಚಪ್ಪ ಅವರನ್ನು ಗಡಿಪಾರು ಮಾಡಬೇಕು ಮತ್ತು ಸಂಘಟನೆಯೊಂದಿಗೆ ಅರಣ್ಯ ಅಧಿಕಾರಿಗಳು ಶಾಮೀಲಾಗಿರುವ ಬಗ್ಗೆ ಶಂಕೆಯಿದ್ದು, ಉನ್ನತ ಮಟ್ಟದ ತನಿಖೆ ನಡೆಸಬೇಕೆಂದು ಒತ್ತಾಯಿಸಿರುವ ಮನವಿ ಪತ್ರವನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸಿರುವುದಾಗಿ ಎ.ಕೆ.ಸುಬ್ಬಯ್ಯ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕೊಡಗು ಹೆಗ್ಗಡೆ ಸಮಾಜದ ಅಧ್ಯಕ್ಷರಾದ ಪಿ.ಜಿ.ಅಯ್ಯಪ್ಪ ಹಾಗೂ ಸೌಹಾರ್ದ ವೇದಿಕೆಯ ಪ್ರಮುಖರಾದ ವಕೀಲ ಕೆ.ಆರ್.ವಿದ್ಯಾಧರ್ ಉಪಸ್ಥಿತರಿದ್ದರು.