ಹಾಸನ: ಕಳೆದ 20 ವರ್ಷಗಳಿಂದ ಕಾರಾಣಾಂತರಗಳಿಂದ ನಿಂತು ಹೋಗಿದ್ದ ಪ್ರಸಿದ್ಧ ದನಗಳ ಜಾತ್ರೆಗೆ ಸೋಮವಾರ ಮಾಜಿ ಸಚಿವ ಹಾಗೂ ಶಾಸಕ ಎಚ್.ಡಿ ರೇವಣ್ಣ ಚಾಲನೆ ನೀಡಿದರು.
ನಗರದ ಮಹಾರಾಜ ಪಾರ್ಕಿನಿಂದ ಹೊರಟ ಮೆರವಣಿಗೆಯು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಮೆರವಣಿಗೆಯಲ್ಲಿ ಎತ್ತಿನ ಗಾಡಿಗಳು ಹಾಗೂ ನಂದಿ ಧ್ವಜ ಕುಣಿತ ಹಾಗೂ ವಿವಿಧ ಕಲಾತಂಡಗಳು ಪಾಲ್ಗೊಂಡು ನೋಡುಗರ ಗಮನ ಸೆಳೆದವು.
ನಿಂತು ಹೋಗಿದ್ದ ದನಗಳ ಜಾತ್ರೆಗೆ ನಗರಸಭೆ ಮರುಜೀವ ನೀಡಿದ್ದು ನಗರದ ಗೊರೂರು ರಸ್ತೆಯಲ್ಲಿರುವ 15 ಎಕರೆ ವಿಶಾಲ ಗದ್ದೆ ಹಳ್ಳದಲ್ಲಿ ಜಾತ್ರೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಜಾತ್ರೆಗೆ ವಿವಿಧ ಕಡೆಗಳಿಂದ ಆಗಮಿಸುವ ದನಗಳಿಗೆ ಕುಡಿಯುವ ನೀರು, ಮೇವು, ಪೆಂಡಾಲ್, ವಿದ್ಯುತ್ ಸೇರಿದಂತೆ ಇನ್ನಿತರ ಮೂಲಸೌಲಭ್ಯಗಳನ್ನು ನಗರಸಭೆ ಒದಗಿಸಿಕೊಟ್ಟಿದ್ದು ಜಾತ್ರಾ ಮೈದಾನ ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿದೆ.