ಚಿಕ್ಕಮಗಳೂರು : ಚಿಕ್ಕಮಗಳೂರು ಮತ್ತು ದಕ್ಷಿಣ ಕನ್ನಡ ಜಿಲ್ಲೆಯನ್ನು ಸಂಪರ್ಕಿಸುವ ಚಾರ್ಮಾಡಿ ರಸ್ತೆಗೆ ಬದಲಾಗಿ ಭೈರಾಪುರ- ಶಿಶಿಲ ರಸ್ತೆಯನ್ನು ನಿರ್ಮಿಸಬೇಕೆಂಬ ಕಳೆದ ಮೂರು ದಶಕಗಳಿಂದ ಕೂಗು ಕೇಳಿಬಂದಿದೆ. ಇನ್ನೊಂದಡೆ ಅರಣ್ಯ ಇಲಾಖೆಯ ಪ್ರದೇಶವನ್ನು ಹೊರತು ಪಡಿಸಿ ಈಗಾಗಲೇ ಗ್ರಾಮಸ್ಥರೇ ರಸ್ತೆ ನಿರ್ಮಾಣವನ್ನೂ ಮಾಡಿದ್ದಾರೆ.
ಸರ್ಕಾರದಿಂದ ಸರ್ವೆ ಕಾರ್ಯ ಪೂರ್ಣಗೋಳಿಸುತ್ತಿದ್ದಂತೆ ಜಿಲ್ಲಾದ್ಯಾಂತ ಪರ-ವಿರೋಧ ಚರ್ಚೆ ಆರಂಭವಾಗಿದ್ದು ,ದೊಡ್ಡ ವಿವಾದವಾಗಿ ಪರಿಣಾಮಿಸಿದೆ. ಚಿಕ್ಕಮಗಳೂರು ಹಾಗು ದಕ್ಷಿಣ ಕನ್ನಡ ಜಿಲ್ಲೆಯನ್ನು ಸಂಪರ್ಕಿಸುವ ಪ್ರಮುಖ ರಸ್ತೆಗಳಲ್ಲಿ ಒಂದಾಗಿರುವ ಚಾರ್ಮಾಡಿಗೆ ಪರ್ಯಾಯ ರಸ್ತೆ ಬೇಕು ಎನ್ನುವ ಕೂಗು ಇಂದು ನಿನ್ನೆಯದಲ್ಲ. ಮಳೆಗಾಲ ಬಂತೆಂದರೆ ಜೀವ ಕೈಯಲ್ಲಿ ಹಿಡಿದು ಚಾರ್ಮಾಡಿ ಘಾಟಿಯಲ್ಲಿ ಸಂಚರಿಸಬೇಕಾದ ಸ್ಥಿತಿ. ನೈಸರ್ಗಿಕ ವಿಕೋಪ ಎದುರಾದಾಗ ಬದಲಿ ರಸ್ತೆ ಕುರಿತು ಮಾತನಾಡುವ ಜನ ಪ್ರತಿನಿಧಿಗಳಿಗೆ ಮತ್ತೆ ಅತ್ತ ಯೋಚಿಸುವುದೇ ಇಲ್ಲ. ಇದಕ್ಕೆ ಬದಲಾಗಿ ಭೈರಾಪುರ – ಶಿಶಿಲ ರಸ್ತೆ ನಿರ್ಮಿಸಬೇಕು ಎನ್ನುವ ಬೇಡಿಕೆ ಮೂರು ದಶಕಗಳಷ್ಟು ಹಳೆಯದು.
ಈ ರಸ್ತೆ ನಿರ್ಮಿಸಿದಲ್ಲಿ ಧರ್ಮಸ್ಥಳ ಇನ್ನಿತರೆ ಪ್ರದೇಶಗಳನ್ನು ಕಡಿಮೆ ಅಂತರದಲ್ಲಿ ತಲುಪಲು ಸಾಧ್ಯ ಎನ್ನುವುದು ಸ್ಥಳೀಯರ ವಾದ. ಈಗಾಗಲೇ ಭೈರಾಪುರ- ಶಿಶಿಲವನ್ನು ಸಂಪರ್ಕಿಸುವ ಕಚ್ಚಾರಸ್ತೆಯೂ ಇದೆ. ಅದನ್ನು ಅಭಿವೃದ್ಧಿ ಪಡಿಸಿ ಉತ್ತಮಗೊಳಿಸಿದಲ್ಲಿ ವಾಹನಗಳನ್ನು ಓಡಿಸಲು ಸಾಧ್ಯ ಎನ್ನುವ ಸ್ಥಳೀಯರು ಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕುತ್ತಾರೆ. ಬೈರಾಪುರ ಮತ್ತು ಶಿಶಿಲ ರಸ್ತೆಯ ನಡುವಿನ ಅಂತರ 35 ಕಿ.ಲೋಮೀಟರ್ ಗಳಾಗಿದ್ದು ,ಈಗಾಗಲೇ ಜನರೇ 10 ಕಿಲೊಮೀಟರ್ ಕಚ್ಚಾ ರಸ್ತೆಯನ್ನು ಅಭಿವೃದ್ದಿ ಪಡಿಸಿದ್ದಾರೆ.ಇನ್ನು ಉಳಿದ 25 ಕಿ.ಲೋಮೀಟರ್ ಅರಣ್ಯ ಇಲಾಖೆಯ ವ್ಯಾಪ್ತಿಗೆ ಬರಲಿದೆ. ಇದಕ್ಕೆ ಅನುಮತಿ ಕಡ್ಡಾಯವಾಗಿರುವ ಹಿನ್ನಲೆಯಲ್ಲಿ ಗ್ರಾಮಸ್ಥರು ತಟ್ಟಸ್ಥರಾಗಿದ್ದಾರೆ. ಈ ನಡುವೆ ಹಲವು ದಶಕಗಳ ಬೇಡಿಕೆಗೆ ಸರ್ಕಾರವೂ ಅಸ್ತು ಎಂದ ಸರ್ವೇ ಕಾರ್ಯವನ್ನು ಪೂರ್ಣಗೊಳಿಸಿದೆ. ಇದು ದೊಡ್ಡ ಚರ್ಚೆಗೆ ಜಿಲ್ಲೆಯಲ್ಲಿ ಗ್ರಾಸವಾಗಿದೆ. ಇದಕ್ಕೆ ಪರಿಸರವಾದಿಗಳು ವಿರೋಧ ವ್ಯಕ್ತಪಡಿಸಿದ್ದು, ಇದೊಂದು ಸೂಕ್ಷ್ಮ ಅರಣ್ಯ ಪ್ರದೇಶವಾಗಿದ್ದು ಇಲ್ಲಿ ರಸ್ತೆ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.
ಜೊತೆಗೆ ಅರಣ್ಯ ಇಲಾಖೆ ಇಲ್ಲಿ ಸರ್ವೇ ಮಾಡೋದಕ್ಕೆ ಸರ್ಕಾರಕ್ಕೆ ಯಾವುದೇ ಪತ್ರವನ್ನು ಬರೆದಿಲ್ಲ,ಅಲ್ಲದೇ ಈ ಭಾಗದಲ್ಲಿ ವನ್ಯ ಪ್ರಾಣಿಗಳು ಹೆಚ್ಚಾಗಿ ವಾಸವಾಗಿರೋದರಿಂದ ರಸ್ತೆ ಮಾಡಲು ಸಾಧ್ಯವಿಲ್ಲ ಎಂದೂ ಅರಣ್ಯ ಇಲಾಖೆ ಸರ್ಕಾರಕ್ಕೆ ತಿಳಿಸಿದೆ. ಒಟ್ಟಾರೆಯಾಗಿ ಚಾರ್ಮಾಡಿ ಘಾಟಿಯಲ್ಲಿ ವಾಹನ ದಟ್ಟಣೆ, ಮಳೆಗಾಲದಲ್ಲಿ ಎದುರಾಗುವ ಪ್ರಕೃತಿ ವಿಕೋಪ, ಜೊತೆಗೆ ದೂರ ಪ್ರಯಣ ಇದಕ್ಕೆಲ್ಲಾ ವಿರಾಮ ಹಾಕಲು ಬದಲಿ ರಸ್ತೆ ಬೇಕೆಂಬ ಜನರ ಬೇಡಿಕೆಯಲ್ಲೂ ಅರ್ಥವಿದೆ. ಇದರ ನಡುವೆ ರಸ್ತೆ ನಿರ್ಮಾಣಕ್ಕೆ ಪರಿಸರವಾದಿಗಳು ವ್ಯಕ್ತಪಡಿಸಿದ್ದಾರೆ. ಸ್ಥಳೀಯರು ರಸ್ತೆ ನಿರ್ಮಾಣವಾಗಲೇ ಬೇಕೆಂದು ಒತ್ತಡವನ್ನು ಜನಪ್ರತಿನಿಧಿಗಳು ಮೂಲಕ ಹೇರುತ್ತಿದ್ದಾರೆ. ಇದಕ್ಕಾಲ್ಲ ಪರಿಹಾರ ಎನ್ನುವಂತೆ ಸರ್ಕಾರ ಪರಿಸರವಾದಿಗಳು ಮತ್ತು ಗ್ರಾಮಸ್ಥರ ನಡುವೆ ಸಂವಾದ ಏರ್ಪಡಿಸಿ, ಪರಿಸರಕ್ಕೆ ಪೂರಕವಾಗಿರುವ ರಸ್ತೆಯನ್ನು ನಿರ್ಮಾಣ ಮಾಡಿದ್ರೆ ಸಮಸ್ಯೆ ಬಗೆಹರಿವುದರಲ್ಲಿ ಯಾವುದೆ ಅನುಮಾನವೇ ಇಲ್ಲ.