ಚಿಕ್ಕಮಗಳೂರು: ಇಂಡಿಯನ್ ಬ್ಲೈಂಡ್ ಸ್ಪೋಟ್ರ್ಸ್ ಅಸೋಸಿಯೇಷನ್ ದೆಹಲಿಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ 20ನೇ ರಾಷ್ಟ್ರ ಮಟ್ಟದ ಅಂಧರ ಕ್ರೀಡಾಕೂಟದಲ್ಲಿ ನಗರದ ಆಶಾಕಿರಣ ಅಂಧ ಮಕ್ಕಳ ವಸತಿಯುತ ಪಾಠ ಶಾಲೆಯ ಕ್ರೀಡಾ ತಂಡ ಭಾಗವಹಿಸಿ ರಾಷ್ಟ ಮಟ್ಟದಲ್ಲಿ 40 ಪದಕಗಳನ್ನು ಪಡೆಯುವ ಮೂಲಕ ಪ್ರಥಮ ಸ್ಥಾನ ಪಡೆದಿದೆ ಎಂದು ಸಂಸ್ಥೆಯ ಅಧ್ಯಕ್ಷ ಡಾ.ಜೆ.ಪಿ.ಕೃಷ್ಣೆಗೌಡ ತಿಳಿಸಿದ್ದಾರೆ.
ಬಾಲಕಿಯರ ವಿಭಾಗದಲ್ಲಿ ಟೀಂ ಚಾಂಪಿಯನ್ ಶಿಪ್ ಹಾಗೂ 15 ಚಿನ್ನ 17 ಬೆಳ್ಳಿ, 8 ಕಂಚಿನ ಪದಕಗಳನ್ನು ಗೆಲ್ಲುವುದರ ಮೂಲಕ ಶಾಲೆ, ಜಿಲ್ಲೆ ಹಾಗೂ ರಾಜ್ಯಕ್ಕೆ ಮಕ್ಕಳು ಕೀರ್ತಿ ತಂದಿದ್ದಾರೆ. ಕ್ರೀಡಾಕೂಟದಲ್ಲಿ 10 ಬಾಲಕರು, 10 ಬಾಲಕಿಯರು ಸೇರಿ ಒಟ್ಟು 20 ಮಕ್ಕಳು ಆಶಾಕಿರಣವನ್ನು ಪ್ರತಿನಿಧಿಸಿದ್ದರು. ತಂಡದಲ್ಲಿ ಸಾಧನೆಗೈದ ಪ್ರಮುಖರೆಂದರೆ ವಿ. ರಾಧ 400, 800, 1500 ಮೀಟರ್ ಓಟದಲ್ಲಿ ಚಿನ್ನದ ಪದಕ, ಪಿ, ವರದರಾಜು 400, 800, 1500 ಮೀಟರ್ ಓಟದಲ್ಲಿ ಕ್ರಮವಾಗಿ ಚಿನ್ನ ಹಾಗೂ 2 ಕಂಚಿನ ಪದಕಗಳು, ಆರ್. ರಕ್ಷಿತ 400, 100 ಮೀಟರ್ನಲ್ಲಿ ಚಿನ್ನ ಹಾಗೂ ಬೆಳ್ಳಿ ಪದಕಗಳನ್ನು ಪಡೆದಿದ್ದಾರೆ. ಸಂಜೂಬಾಯಿ 200, 100 ಹಾಗೂ 400 ಮೀಟರ್ ನಲ್ಲಿ ಕ್ರಮವಾಗಿ ಚಿನ್ನ, ಬೆಳ್ಳಿ ಹಾಗೂ ಕಂಚು, ಪ್ರಮಿಳಾ 400 ಹಾಗೂ 100 ಮೀಟರ್ ನಲ್ಲಿ ಚಿನ್ನ, ಬೆಳ್ಳಿ, ಎಂ.ಎಸ್. ಶರತ್ 200, 400 ಮೀಟರ್ ಗಳಲ್ಲಿ ಬೆಳ್ಳಿ, ಹೆಚ್.ಎಸ್.ಅನೂಪ 400, 800 ಮೀಟರ್ ಗಳಲ್ಲಿ ಬೆಳ್ಳಿ, ಎಂ.ಎನ್.ಸೌಮ್ಯ 400, 800, 1500 ಮೀಟರ್ ಗಳಲ್ಲಿ ಬೆಳ್ಳಿ, ಎ.ಮೈನಾ 100, 400 ಮೀಟರ್ ಗಳಲ್ಲಿ ಬೆಳ್ಳಿ, ಬಿ.ಎಂ.ಸುದೀಪ 200 ಮೀಟರ್ ನಲ್ಲಿ ಬೆಳ್ಳಿ, ಕೆ.ಜಿ.ಕೇಶವಮೂರ್ತಿ 200 ಮೀಟರ್ ನಲ್ಲಿ ಕಂಚು ಪಡೆದುಕೊಂಡಿದ್ದಾರೆ.