ಗುಂಡ್ಲುಪೇಟೆ: ಅರಣ್ಯ ಇಲಾಖೆಯು ರಾಮನಗರ ಹಾಗೂ ಹಾಸನದಲ್ಲಿ ಅರಣ್ಯಗಳಿಂದ ಹೊರಬಂದು ನಾಡಿನ ರೈತರಿಗೆ ಸೇರಿದ ಬೆಳೆಗಳನ್ನು ತಿಂದು ನಾಶ ಮಾಡಿದ್ದಲ್ಲದೆ, ಮನುಷ್ಯನಿಗೂ ಕಂಟಕವಾಗಿದ್ದ ಪುಂಡಾನೆಗಳನ್ನು ಸೆರೆಹಿಡಿದಿದ್ದು, ಇದೀಗ ಅವುಗಳನ್ನು ಬಂಡೀಪುರ ರಾಷ್ಟ್ರೀಯ ಉದ್ಯಾನಕ್ಕೆ ತಂದು ಬಿಡಲಾಗಿದೆ.
ರಾಮನಗರ ಹಾಗೂ ಹಾಸನ ಜಿಲ್ಲೆಯ ವಿವಿಧೆಡೆಗಳಲ್ಲಿ ಪುಂಡಾಟ ನಡೆಸಿ ಅಪಾರ ಹಾನಿಯುಂಟು ಮಾಡಿದ್ದ ರೌಡಿ ರಂಗ ಸೇರಿದಂತೆ 4 ಆನೆಗಳ ಸೆರೆಗೆ ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸಿದ್ದು. ಇದಕ್ಕಾಗಿ ದಸರಾ ಆನೆಗಳನ್ನು ಐಹೊಳೆ, ನಂಜನಗೂಡು ಕಡೆಯಿಂದ ಕರೆಸಲಾಗಿತ್ತು. ಸೆರೆ ಸಿಕ್ಕ ಆನೆಗಳಿಗೆ ಅರಿವಳಿಕೆ ಮದ್ದು ನೀಡಿ ಗಾಯಗಳಿಗೆ ಚಿಕಿತ್ಸೆ ನೀಡಲಾಗಿತ್ತು.
ಇವುಗಳಲ್ಲಿ ಡಿ.22 ರಂದು ಸಂಜೆ ಒಂದು ಆನೆಯನ್ನು ಮದ್ದೂರು ಮೂಲೆಹೊಳೆ ಸಮೀಪ ಕಾಡಿಗೆ ಬಿಡಲಾಗಿತ್ತು. 25 ವರ್ಷ ವಯಸ್ಸಿನ ರೌಡಿ ರಂಗ ಆನೆಯನ್ನು ಡಿ.23 ರಂದು ಮುಂಜಾನೆ ಲಾರಿಯಲ್ಲಿ ಬಂಡೀಪುರ ರಾಷ್ಟ್ರೀಯ ಉದ್ಯಾನದ ಮೂಲೆಹೊಳೆ ಅರಣ್ಯ ಪ್ರದೇಶಕ್ಕೆ ಕರೆತರಲಾಯಿತು. ಇನ್ನೆರಡು ಆನೆಗಳ ಸಹಾಯದಿಂದ ಇದನ್ನು ಅರಣ್ಯ ಪ್ರದೇಶದಲ್ಲಿ ಬಿಡಲಾಗಿದೆ.
ಈ ಸಂದರ್ಭದಲ್ಲಿ ಅರಣ್ಯ ಇಲಾಖೆಯ ಪಶುವೈದ್ಯ ಡಾ.ನಾಗರಾಜು, ಮೂಲೆಹೊಳೆ ವಲಯಾರಣ್ಯಾಧಿಕಾರಿ ನಟರಾಜು ಹಾಗೂ ಸಿಬ್ಬಂದಿ ಇದ್ದರು.