ಮಡಿಕೇರಿ: ಆದಿವಾಸಿ ಅರಣ್ಯ ಹಕ್ಕು ಮಸೂದೆಯಡಿ ಜಿಲ್ಲೆಯ ಮೂಲ ನಿವಾಸಿ ಗಿರಿಜನರಿಗೆ ಹಕ್ಕುಪತ್ರ ನೀಡಬೇಕೇ ಹೊರತು, ಅರಣ್ಯವನ್ನು ಅತಿಕ್ರಮಣ ಮಾಡಿಕೊಂಡಿರುವ ವಲಸಿಗರಿಗೆ ಯಾವುದೇ ಕಾರಣಕ್ಕೂ ಭೂಮಿ ನೀಡಬಾರದೆಂದು ಒತ್ತಾಯಿಸಿರುವ ಕೂರ್ಗ್ ವೈಲ್ಡ್ ಲೈಫ್ ಸೊಸೈಟಿ ದಿಡ್ಡಳ್ಳಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ಆಕ್ಷೇಪ ವ್ಯಕ್ತಪಡಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷ ಕರ್ನಲ್ ಸಿ.ಪಿ. ಮುತ್ತಣ್ಣ, ಸರ್ಕಾರ ಎಚ್ಚೆತ್ತುಕೊಳ್ಳದಿದ್ದಲ್ಲಿ ಕರ್ನಾಟಕ ರಾಜ್ಯದ ಪಶ್ಚಿಮ ಘಟ್ಟ ಪ್ರದೇಶದಲ್ಲಿ ನಕ್ಸಲ್ ಚಟುವಟಿಕೆ ತೀವ್ರಗೊಳ್ಳುವುದು ಖಚಿತವೆಂದು ಅಭಿಪ್ರಾಯಪಟ್ಟರು. ದಿಡ್ಡಳ್ಳಿ ಪ್ರಕರಣದಲ್ಲಿ ಟಿಂಬರ್ ಲಾಬಿ ಕೈವಾಡವಿದ್ದು, ನಿವೇಶನ ಹಂಚಿಕೆ ನೆಪದಲ್ಲಿ ಮರಗಳನ್ನು ನಾಶ ಮಾಡುವ ಹುನ್ನಾರ ಅಡಗಿದೆ ಎಂದು ಆರೋಪಿಸಿದರು. ಈ ಕುರಿತು ತನಿಖೆೆಯಾಗಬೇಕೆಂದು ಒತ್ತಾಯಿಸಿದ ಅವರು, ತಲೆ ತಲಾಂತರಗಳಿಂದ ಕಾಡಿನಲ್ಲಿ ವಾಸಿಸುತ್ತಿರುವ ಗಿರಿಜನರಿಗೆ ಆದಿವಾಸಿ ಅರಣ್ಯ ಹಕ್ಕು ಮಸೂದೆಯ ಮೂಲಕ ಭೂಮಿ ಮಂಜೂರು ಮಾಡುವುದಕ್ಕೆ ನಮ್ಮ ವಿರೋಧವಿಲ್ಲವೆಂದು ಸ್ಪಷ್ಟಪಡಿಸಿದರು.
ದಿಡ್ಡಳ್ಳಿಯಲ್ಲಿ ಕಳೆದ ಆರು ತಿಂಗಳ ಹಿಂದೆ ಬಂದು ನೆಲೆ ನಿಂತಿರುವ ವಲಸಿಗರಿಗೆ ಯಾವುದೇ ಕಾರಣಕ್ಕೂ ಜಮೀನು ಮಂಜೂರು ಮಾಡಬಾರದು. ಒಂದು ವೇಳೆ ಜಮೀನು ಮಂಜೂರಾತಿಗೆ ಮುಂದಾದರೆ ಕಾನೂನಿನ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ನಿರಾಶ್ರಿತರೆಂದು ಹೇಳಿಕೊಂಡು ದಿಡ್ಡಳ್ಳಿಯಲ್ಲಿ ಪ್ರತಿಭಟನೆ ನಡೆಸುತ್ತಿರುವವರಿಗೆ ನಿವೇಶನ ಮಾತ್ರವಲ್ಲ ತಾತ್ಕಾಲಿಕ ಶೆಡ್ ಅನ್ನು ಕೂಡ ನೀಡಬಾರದೆಂದು ಒತ್ತಾಯಿಸಿದ ಕರ್ನಲ್ ಸಿ.ಪಿ. ಮುತ್ತಣ್ಣ ಪ್ರತಿಭಟನಾ ನಿರತರಲ್ಲಿ ಕೆಲವರು ನೇರವಾಗಿ ನಕ್ಸಲರೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂದು ಆರೋಪಿಸಿದರು.
ಈಗಾಗಲೆ ಜಿಲ್ಲೆಯಲ್ಲಿ ಹೈಟೆನ್ಶನ್ ವಿದ್ಯುತ್ ಮಾರ್ಗದ ನಿರ್ಮಾಣದಿಂದ 54 ಸಾವಿರ ಮರಗಳು ನಾಶವಾಗಿ ಮಳೆಯ ಕೊರತೆ ಎದುರಾಗಿದೆ. ರಾಜಕಾರಣಿಗಳಿಗೆ ಮರಗಳು ನೋಟು ನೀಡುತ್ತವೆಯೇ ಹೊರತು ಓಟು ನೀಡುವುದಿಲ್ಲ. ಇದೇ ಕಾರಣಕ್ಕೆ ದಿಡ್ಡಳ್ಳಿಯಂತಹ ಪ್ರಕರಣಗಳು ನಡೆಯುತ್ತಿವೆ ಎಂದು ಕರ್ನಲ್ ಸಿ.ಪಿ. ಮುತ್ತಣ್ಣ ಅಭಿಪ್ರಾಯಪಟ್ಟರು. ಪ್ರಚಾರ ಗಿಟ್ಟಿಸಿಕೊಳ್ಳುವುದಕ್ಕಾಗಿ ಸಿನಿಮಾ ನಟರು ಸೇರಿದಂತೆ ಕೆಲವು ವ್ಯಕ್ತಿಗಳು ಪ್ರತಿಭಟನಾ ನಿರತರಾಗಿದ್ದು, ಈ ಹೋರಾಟದ ಬಗ್ಗೆ ಪೊಲೀಸರು ನಿಗಾ ವಹಿಸಬೇಕೆಂದರು. ಕೊಡಗಿನ ಅರಣ್ಯವಿರುವುದು ವಲಸಿಗರು ಬಂದು ನೆಲೆಸುವುದಕ್ಕಲ್ಲ, ಅರಣ್ಯವನ್ನು ಸಂರಕ್ಷಿಸಿದಾಗ ಮಾತ್ರ ಪರಿಸರದ ಸಮತೋಲನವನ್ನು ಕಾಯ್ದುಕೊಳ್ಳಬಹುದಾಗಿದೆ ಎಂದು ಅವರು ಹೇಳಿದರು.
ನಿರಾಶ್ರಿತರೆಂದು ಹೇಳಿಕೊಳ್ಳುತ್ತಿರುವವರು ಇಲ್ಲಿಯವರೆಗೆ ಎಲ್ಲಿದ್ದರು ಎಂದು ಪ್ರಶ್ನಿಸಿದ ಕರ್ನಲ್ ಸಿ.ಪಿ. ಮುತ್ತಣ್ಣ, ಬೆಂಗಳೂರಿನ ಕಬ್ಬನ್ ಪಾರ್ಕ್ ನನಲ್ಲಿ ಗುಡಿಸಲುಗಳನ್ನು ನಿರ್ಮಿಸಿಕೊಂಡಾಕ್ಷಣ ಅದನ್ನು ನಿವೇಶನವನ್ನಾಗಿ ಹಂಚಲು ಸಾಧ್ಯವೆ ಎಂದರು. ಯಾವುದೇ ಕಾರಣಕ್ಕೂ ವಲಸಿಗರಿಗೆ ಕೊಡಗಿನ ಅರಣ್ಯ ಪ್ರದೇಶದಲ್ಲಿ ನೆಲೆ ನಿಲ್ಲಲು ಅವಕಾಶ ನೀಡುವುದಿಲ್ಲವೆಂದು ಸ್ಪಷ್ಟಪಡಿಸಿದರು.
ಬಸವಣ್ಣ ದೇವರ ಬನ ಟ್ರಸ್ಟ್ನ ಪ್ರಮುಖರಾದ ಡಾ.ಬಿ.ಸಿ. ನಂಜಪ್ಪ ಮಾತನಾಡಿ, ಆದಿವಾಸಿ ಅರಣ್ಯ ಹಕ್ಕು ಮಸೂದೆಯ ನಿಯಮಗಳನ್ನು ತಿರುಚುವ ಕೆಲಸವನ್ನು ರಾಜಕಾರಣಿಗಳು ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಈ ಮಸೂದೆ ಇರುವುದು ತಲೆ ತಲಾಂತರಗಳಿಂದ ಅರಣ್ಯ ಭೂಮಿಯಲ್ಲಿ ವಾಸಿಸುತ್ತಿರುವ ಆದಿವಾಸಿಗಳಿಗೇ ಹೊರತು, ಎಲ್ಲಿಂದಲೋ ಬಂದು ಆರು ತಿಂಗಳು ನೆಲೆ ನಿಂತವರಿಗೆ ಅಲ್ಲವೆಂದು ಅಭಿಪ್ರಾಯಪಟ್ಟರು.
ಅರಣ್ಯ ಭೂಮಿಯನ್ನು ರಾಜಕಾರಣಿಗಳು ತಮ್ಮ ಮೂಗಿನ ನೇರಕ್ಕೆ ಪೈಸಾರಿ ಜಾಗವೆಂದು ಪ್ರಚಾರ ನೀಡುತ್ತಿದ್ದಾರೆ. ದುರ್ಬಲರನ್ನು ಹಾದಿ ತಪ್ಪಿಸುವ ಕಾರ್ಯ ನಡೆಯುತ್ತಿದ್ದು, ವಲಸೆ ಬಂದವರಿಗೆ ಅರಣ್ಯದಲ್ಲಿ ನೆಲೆಸಲು ಅವಕಾಶವಿಲ್ಲವೆಂದರು. ದಕ್ಷಿಣ ರಾಜ್ಯಗಳ 8 ಕೋಟಿ ಜನರು ಕಾವೇರಿ ನದಿಯನ್ನೆ ಅವಲಂಬಿತರಾಗಿದ್ದಾರೆ. ಆದರೆ, ಅರಣ್ಯದ ಮೇಲಿನ ನಿರಂತರ ದಾಳಿಯಿಂದ ಮಳೆಯ ಕೊರತೆ ಎದುರಾಗಿ ಬರ ಪರಿಸ್ಥಿತಿಯನ್ನು ಎದುರಿಸುವಂತಾಗಿದೆ. ಅರಣ್ಯ ಹಕ್ಕು ಮಸೂದೆಯ ಪ್ರಕಾರ ಮೂಲ ಆದಿವಾಸಿಗಳಿಗೆ 10 ಏಕರೆ ಜಾಗ ಹಾಗೂ ಮೂಲಭೂತ ಸೌಲಭ್ಯಗಳನ್ನು ನೀಡಲು ಅವಕಾಶವಿದ್ದು, ಇದಕ್ಕೆ ನಮ್ಮ ಬೆಂಬಲವಿದೆಯೇ ಹೊರತು ವಲಸಿಗರಿಗಿಲ್ಲವೆಂದು ಡಾ.ಬಿ.ಸಿ. ನಂಜಪ್ಪ ಸ್ಪಷ್ಟಪಡಿಸಿದರು.
ಸಣ್ಣ ಕಾಫಿ ಬೆಳೆಗಾರರ ಒಕ್ಕೂಟದ ಪಾಲಿಬೆಟ್ಟ ವಿಭಾಗದ ಅಧ್ಯಕ್ಷ ಡಾ. ಎ.ಸಿ.ಗಣಪತಿ ಮಾತನಾಡಿ, ಹೋರಾಟದ ನೆಪದಲ್ಲಿ ಕೊಡಗಿನ ಎಲ್ಲಾ ಬೆಳೆಗಾರರನ್ನು ಖಳನಾಯಕರಂತೆ ಪ್ರತಿಬಿಂಬಿಸಲಾಗುತ್ತಿದೆ ಎಂದು ವಿಷಾದಿಸಿದರು. ಬೆಳೆಗಾರರಿಂದ ಕಾರ್ಮಿಕರ ಮೇಲೆ ದೌರ್ಜನ್ಯ ನಡೆದಿದ್ದರೆ ಕಾರ್ಮಿಕ ಇಲಾಖೆಗೆ ದೂರು ನೀಡಬೇಕೆ ಹೊರತು ಎಲ್ಲಾ ಬೆಳೆಗಾರರನ್ನು ದೂಷಿಸುವುದು ಸರಿಯಲ್ಲ. ಜಿಲ್ಲೆಯಲ್ಲಿ ಬೆಳೆಗಾರರು ಹಾಗೂ ಕಾರ್ಮಿಕರು ಸೌಹಾರ್ದತೆಯಿಂದ ಜೀವನ ಸಾಗಿಸುತ್ತಿದ್ದಾರೆ. ಸರ್ಕಾರ ನಿಗದಿ ಮಾಡಿರುವ ವೇತನಕ್ಕಿಂತ ಹೆಚ್ಚಿನ ವೇತನವನ್ನೆ ನೀಡುತ್ತಿರುವುದರಿಮದ ಅಸ್ಸಾಂ ನಂತಹ ಪ್ರದೇಶದಿಂದ ವಲಸೆ ಕಾರ್ಮಿಕರು ಕೊಡಗು ಜಿಲ್ಲೆಗೆ ಆಗಮಿಸುತ್ತಿದ್ದಾರೆ ಎಂದು ಡಾ.ಎ.ಸಿ.ಗಣಪತಿ ಅಭಿಪ್ರಾಯಪಟ್ಟರು. ಕಾಲ್ಪನಿಕ ಆರೋಪಗಳನ್ನು ಮಾಡಿ ಬೆಳೆಗಾರರು ಹಾಗೂ ಕಾರ್ಮಿಕರ ನಡುವೆ ವೈಮನಸ್ಸು ಮೂಡಿಸುವ ಹೋರಾಟಗಾರರ ವಿರುದ್ಧ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದರು.
ಅರಣ್ಯ ಪ್ರದೇಶದಲ್ಲಿದ್ದ ಗುಡಿಸಲುಗಳನ್ನು ತೆರವುಗೊಳಿಸುವ ಮೂಲಕ ಕಾನೂನು ಪಾಲನೆ ಮಾಡಿದ ಅಧಿಕಾರಿಗಳಿಗೆ ದೌರ್ಜನ್ಯ ಕಾಯ್ದೆಯಡಿ ದೂರು ದಾಖಲಾಗುವ ಆತಂಕವಿದ್ದು, ಸಕರ್ಾರ ಅಧಿಕಾರಿಗಳಿಗೆ ಸೂಕ್ತ ಭದ್ರತೆ ನೀಡಬೇಕೆಂದರು.