ಮಡಿಕೇರಿ: ಮಡಿಕೇರಿ: ಕೊಡಗಿನ ಸಿದ್ದಾಪುರ ಬಳಿಯ ದಿಡ್ಡಳ್ಳಿಯ ದೇವಮ್ಮಚ್ಚಿ ಅರಣ್ಯ ಪ್ರದೇಶದಲ್ಲಿ ಅಕ್ರಮ ಗುಡಿಸಲು ತೆರವಿನಿಂದ ಸಂತ್ರಸ್ತರಾದ 577 ಆದಿವಾಸಿ ಕುಟುಂಬಗಳಿಗೆ ಮುಂದಿನ ಒಂದು ತಿಂಗಳ ಅವಧಿಯವರೆಗೆ ಆದಿವಾಸಿಗಳು ಈಗ ಆಶ್ರಮ ಶಾಲೆ ಬಳಿ ನೆಲೆಸಿರುವ ಸ್ಥಳದಲ್ಲಿಯೇ ಮೂಲಭೂತ ಸೌಲಭ್ಯಗಳೊಂದಿಗೆ ತಾತ್ಕಾಲಿಕ ವಾಸ್ತವ್ಯಕ್ಕೆ ವ್ಯವಸ್ಥೆ ಕಲ್ಪಿಸುವ ಭರವಸೆಯನ್ನು ರಾಜ್ಯ ಸಮಾಜ ಕಲ್ಯಾಣ ಇಲಾಖಾ ಸಚಿವ ಆಂಜನೇಯ ನೀಡಿರುವುದರಿಂದ ಹೋರಾಟ ಅಂತ್ಯಗೊಂಡಿದೆ.
ಮುಖ್ಯಮಂತ್ರಿಯವರ ನಿರ್ದೇಶನದಂತೆ ಸಮಾಜ ಕಲ್ಯಾಣ ಇಲಾಖೆಯಿಂದ ರೂ. 1 ಕೋಟಿ ಚೆಕ್ನ್ನು ಸಚಿವರು ಜಿಲ್ಲಾಧಿಕಾರಿ ಆರ್.ವಿ. ಡಿಸೋಜ ಅವರಿಗೆ ಹಸ್ತಾಂತರಿಸಿದ್ದಾರೆ. ಅದೇ ಜಾಗ ಅಲ್ಲದಿದ್ದರೂ ಸನಿಹವಿರುವ ಪ್ರದೇಶಗಳಲ್ಲಿ ಭೂಮಿಯನ್ನು ಪಡೆದು ತಲಾ ಒಬ್ಬರಿಗೆ 30*40ರ ನಿವೇಶನವನ್ನು ಮಂಜೂರು ಮಾಡಿ ಆದಿವಾಸಿಗಳಿಗೆ ಮನೆಗಳನ್ನು ನಿರ್ಮಿಸಿಕೊಟ್ಟು, ಬಡಾವಣೆಯನ್ನು ಅಭಿವೃದ್ಧಿಗೊಳಿಸಿ ನೀರು, ವಿದ್ಯುತ್ ಸೇರಿದಂತೆ ಮೂಲಭೂತ ಸೌಲಭ್ಯ ಕಲ್ಪಿಸಿಕೊಡುವಂತೆ ಆದೇಶಿಸಲಾಗಿದೆ.
ಶುಕ್ರವಾರ ದಿಡ್ಡಳ್ಳಿಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿ ಬಳಿಕ ಹೋರಾಟಗಾರರೊಂದಿಗೆ ಚರ್ಚಿಸಿ ಈ ಕ್ರಮವನ್ನು ಸಮಾಜಕಲ್ಯಾಣ ಸಚಿವ ಆಂಜನೇಯ ಅವರು ತೆಗೆದುಕೊಂಡಿದ್ದಾರೆ. ಇಷ್ಟಕ್ಕೂ ಅರಣ್ಯ ಇಲಾಖೆ ತೆರವುಗೊಳಿಸಿದ ಜಾಗದಲ್ಲಿ ದಿಢೀರ್ ಗುಡಿಸಲು ನಿರ್ಮಾಣ ಮಾಡಿದ ಸಂದರ್ಭವೇ ಅರಣ್ಯ ಇಲಾಖೆ ಮತ್ತು ಜಿಲ್ಲಾಡಳಿತ ಎಚ್ಚೆತ್ತುಕೊಂಡು ಕ್ರಮ ಕೈಗೊಂಡಿದ್ದರೆ ಇವತ್ತು ಇಷ್ಟರ ಮಟ್ಟಿಗೆ ಬೆಳೆಯುತ್ತಿರಲಿಲ್ಲ. ಜತೆಗೆ ಇವತ್ತು ಸೂರಿಗಾಗಿ ಹೋರಾಟ ನಡೆಸುತ್ತಿರುವ ಸುಮಾರು 577 ಕುಟುಂಬಗಳು ಅಸಲಿಗೆ ಅಲ್ಲಿ ನೆಲೆ ನಿಂತವರೇ ಅಲ್ಲ. ಅವರೆಲ್ಲ ಜಿಲ್ಲೆಯ ವಿವಿಧ ಎಸ್ಟೇಟ್ಗಳ, ಬೆಳೆಗಾರರ ಲೈನ್ ಮನೆಯಲ್ಲಿ ನೆಲೆನಿಂತಿದ್ದವರು. ಅವರಿಗೆ ಸೂರು ಕೊಡಿಸುತ್ತೇನೆಂದು ಮುಖಂಡನೊಬ್ಬ ಕರೆತಂದು ಸೂರಿನ ಆಸೆ ಹುಟ್ಟಿಸಿದಲ್ಲದೆ, ನಿಮಗೆ ಸಿಕ್ಕೇ ಸಿಗುತ್ತದೆ ಎಂಬ ಭರವಸೆ ನೀಡಿದ್ದನು. ಇದಕ್ಕಾಗಿ ಅವರಿಂದ ಒಂದಷ್ಟು ಹಣವನ್ನು ಪಡೆದಿದ್ದನು ಎನ್ನಲಾಗುತ್ತಿದೆ. ಸೂರಿನ ಆಸೆಗಾಗಿ ಕೆಲವು ಆದಿವಾಸಿಗಳು ತಾವು ಕೆಲಸ ಮಾಡುತ್ತಿದ್ದ ಮಾಲಿಕರಿಂದಲೇ ಸಾಲವಾಗಿ ಹಣ ಪಡೆದು ನೀಡಿದ್ದಾರೆ ಎಂಬ ಮಾತುಗಳು ಕೂಡ ಕೇಳಿ ಬರುತ್ತಿವೆ.
ಕೊಡಗಿನಲ್ಲಿ ಹಿಂದೆ ಯಾವುದಾದರೂ ಸರ್ಕಾರಿ(ಪೈಸಾರಿ) ಜಾಗವಿದ್ದರೆ ಅಲ್ಲಿ ಗುಡಿಸಲು ಕಟ್ಟಿ, ಬಾಳೆ ಗಿಡನೋ, ಇನ್ನಿತರ ಗಿಡನೆಟ್ಟು ವಾಸ್ತವ್ಯ ಹೂಡಿ ಬಳಿಕ ಅಕ್ರಮವನ್ನು ಸಕ್ರಮ ಮಾಡಿಕೊಳ್ಳುತ್ತಿದ್ದರು. ಹೀಗೆ ನೆಲೆನಿಂತವರು ಬೇಕಾದಷ್ಟು ಮಂದಿ ಇದ್ದಾರೆ. ಅದೇ ತಂತ್ರವನ್ನು ಅಳವಡಿಸಲು ಆದಿವಾಸಿಗಳಿಗೆ ಕೆಲವು ನಾಯಕರು ಪ್ರಚೋದನೆ ನೀಡಿದ್ದಾರೆ. ಅದರಂತೆ ಸ್ವಂತ ಸೂರಿನ ಆಶೆಯಿಂದ ಇಲ್ಲಿಗೆ ಆದಿವಾಸಿಗಳು ತಾವಿದ್ದ ಲೈನ್ ಮನೆಯನ್ನು ಬಿಟ್ಟು ಬಂದು ಬಿಸಿಲು, ಚಳಿಯಲ್ಲಿ ಟೆಂಟ್ ಹಾಕಿಕೊಂಡು ಜೀವನ ಮಾಡುತ್ತಿದ್ದಾರೆ.
ಆದಿವಾಸಿಗಳಿಗೆ ಸ್ವಂತ ಸೂರು ನೀಡಬೇಕೆನ್ನುವುದು ಜಿಲ್ಲೆಯಲ್ಲಿರುವ ಜನಪ್ರತಿನಿಧಿಗಳು ಸೇರಿದಂತೆ ಎಲ್ಲರ ಆಶಯವಾಗಿದೆ. ಆದರೆ ಆದಿವಾಸಿಗಳನ್ನು ಮುಂದಿಟ್ಟುಕೊಂಡು ತಮ್ಮ ಬೇಳೆ ಬೇಯಿಸಿಕೊಳ್ಳುವ ಯತ್ನಕ್ಕೆ ಕೆಲವರು ಕೈಹಾಕಿ ಪ್ರಚೋದನೆ ನೀಡುತ್ತಿರುವುದು ಮುಂದೊಂದು ದಿನ ಕಾರ್ಮಿಕರು ಮತ್ತು ಬೆಳೆಗಾರರ ನಡುವೆ ಒಡಕು ಮೂಡಲು ಕಾರಣವಾಗುತ್ತಿದೆ. ಇದೆಲ್ಲದರ ನಡುವೆ ಆದಿವಾಸಿಗಳ ಸಂಕಲ್ಪ ಸಮಾವೇಶವೂ ಶುಕ್ರವಾರ ಯಶಸ್ವಿಯಾಗಿ ಮಡಿಕೇರಿಯಲ್ಲಿ ನಡೆದಿದೆ. ಆದಿವಾಸಿಗಳ ಪರ ಕೆಲವು ನಾಯಕರು ಮಾತನಾಡಿದ್ದಾರೆ. ಇದೇ ರೀತಿಯ ಬೆಂಬಲ ಮುಂದುವರೆದರೆ ಆದಿವಾಸಿಗಳ ಬದುಕು ಹಸನಾಗುವುದರಲ್ಲಿ ಸಂಶಯವಿಲ್ಲ. ಆದರೆ ಇದು ಮೇಲ್ವರ್ಗದವರ ಮೇಲೆ ಎತ್ತಿಕಟ್ಟುವ ಅಥವಾ ಒಡಕು ಮೂಡಿಸುವ ಕಾರ್ಯಕ್ಕೆ ಪ್ರಚೋದನೆಯಾಗಬಾರದಷ್ಟೆ.
ಆದಿವಾಸಿಗಳು ಟೆಂಟ್ ನಿರ್ಮಿಸಿಕೊಂಡು ಪ್ರತಿಭಟನೆ ನಡೆಸುತ್ತಿರುವ ದಿಡ್ಡಳ್ಳಿ ವ್ಯಾಪ್ತಿಯಲ್ಲಿ ಸಿಸಿಟಿವಿ, ಪೊಲೀಸ್ ಬಂದೋ ಬಸ್ತ್ ಏರ್ಪಡಿಸಲಾಗಿದೆ. ಈಗಾಗಲೇ ಸರ್ಕಾರ ಸೂರು ಕಲ್ಪಿಸುವ ಭರವಸೆ ನೀಡಿದೆ ಇನ್ನಾದರೂ ಎಲ್ಲವೂ ಸರಿಹೋಗುತ್ತದೆಯಾ ಎಂಬುದನ್ನು ಕಾದು ನೋಡಬೇಕಿದೆ.