ಕಡೂರು: ತನ್ನ ಮೂರೂವರೆ ವರ್ಷದ ಅವಧಿಯಲ್ಲಿ ರೂ 300 ಕೋಟಿ ಅನುದಾನ ತರುವ ಮೂಲಕ ಕಡೂರು ವಿಧಾನಸನಭಾ ಕ್ಷೇತ್ರದ ಸಮಗ್ರ ಅಭಿವೃದ್ದಿ ಕೈಗೊಳ್ಳಲಾಗಿದೆ ಎಂದು ಶಾಸಕ ವೈ.ಎಸ್.ವಿ.ದತ್ತ ಹೇಳಿದರು.
ಕಡೂರು ಕ್ಷೇತ್ರದ ಮುಗಳೀಕಟ್ಟೆ ಗ್ರಾಮದಲ್ಲಿ ಶುದ್ದಗಂಗಾ ಘಟಕ ಉಧ್ಘಾಟಿಸಿ ರೂ 38 ಲಕ್ಷ ವೆಚ್ಚದ ಕಾಂಕ್ರೀಟ್ ರಸ್ತೆ ಕಾಮಗಾರಿ ಉಧ್ಘಾಟಿಸಿ ಅವರು ಮಾತನಾಡಿದರು. ಪ್ರತೀ ವರ್ಷ ಶಾಸಕರಿಗೆ ರೂ 2 ಕೋಟಿ ಮಾತ್ರ ಅನುದಾನ ಬರುತ್ತದೆ. ಆದರೆ ಸಿದ್ದರಾಮಯ್ಯನವರ ಸರ್ಕಾರದಲ್ಲಿ ತಾವು ವಿರೋಧ ಪಕ್ಷದ ಶಾಸಕನಾದರೂ ಕ್ಷೇತ್ರದ ಅಭಿವೃದ್ದಿ ಹಿತದೃಷ್ಟಿಯಿಂದ ಸಚಿವರು ಹಾಗೂ ಸರ್ಕಾರದ ಮೇಲೆ ಹೆಚ್ಚಿನ ಪರಿಶ್ರಮ ಹಾಕಿ ಶಾಸಕಗಿರಿಯ 2ನೇ ವರ್ಷದಲ್ಲಿ ರೂ160 ಕೋಟಿ ಅನುದಾನ ತಂದಿದ್ದು ಮೂರೂವರೆ ವರ್ಷದಲ್ಲಿ ರೂ 300 ಕೋಟಿ ತಂದು ಕ್ಷೇತ್ರದ ಸಮಗ್ರ ಅಭಿವೃದ್ದಿ ಕೈಗೊಳ್ಳುತ್ತಿರುವುದಾಗಿ ತಿಳಿಸಿದರು.
ಅಂಬರೀಷ್ರವರು ಸಚಿವರಾಗಿದ್ದ ಅವಧಿಯಲ್ಲಿ ಕ್ಷೇತ್ರಕ್ಕೆ 1500 ಮನೆ ಮಂಜೂರು ಮಾಡಿಸಲಾಯಿತು. ಈ ವರ್ಷದಲ್ಲಿ ಸಾಮಾನ್ಯ ವರ್ಗದ ಬಡವರಿಗೂ ಮನೆಗಳನ್ನು ವಿತರಿಸಲು ರಾಜ್ಯ ಸರ್ಕಾರದಿಂದ 680 ಮನೆಗಳನ್ನು ಮಂಜೂರು ಮಾಡಿಸಲಾಗಿದೆ ಎಂದರು. ಇದೀಗ ಮುಗಳೀಕಟ್ಟೆ ಗ್ರಾಮದ ರೂ 38 ಲಕ್ಷ ಅನುದಾನದ ಕಾಂಕ್ರೀಟ್ ರಸ್ತೆ ಅಭಿವೃದ್ದಿ ಕಾಮಗಾರಿಯನ್ನು ಉಧ್ಘಾಟಿಸಲಾಗಿದೆ. ಅಲ್ಲದೆ ಗ್ರಾಮದ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ದೇವಾಲಯದ ರಾಜಗೋಪುರ ನಿರ್ಮಾಣಕ್ಕೆ ರೂ 25 ಲಕ್ಷ ಅನುದಾನ ನೀಡುವುದಾಗಿ ತಿಳಿಸಿ ಮೊದಲ ಹಂತದಲ್ಲಿ ರೂ 3 ಲಕ್ಷ ನೀಡುತ್ತಿದ್ದೇನೆ. ಅಲ್ಲದೆ ರಾಜಗೋಪುರ ಪ್ರವೇಶ ಮಹೋತ್ಸವದ ಮೂರು ದಿನಗಳ ಕಾರ್ಯಕ್ರಮದ ದಾಸೋಹಕ್ಕಾಗಿ ಧನ ಸಹಾಯ ವಹಿಸಿಕೊಂಡಿರುವುದಾಗಿ ತಿಳಿಸಿದರು.