ಚಾಮರಾಜನಗರ: ಶಾಲೆಗಳಲ್ಲಿ ವಿದ್ಯಾರ್ಥಿಗಳ ಹುಟ್ಟು ಹಬ್ಬ ಆಚರಿಸುವುದು ಸಾಮಾನ್ಯ. ಆದರೆ ಗುಂಡ್ಲುಪೇಟೆ ತಾಲೂಕಿನ ತೆರಕಣಾಂಬಿ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ವಿದ್ಯಾರ್ಥಿಗಳು ಗಿಡಮರಗಳಿಗೆ ಹುಟ್ಟು ಹಬ್ಬ ಮಾಡಿ ಸಂಭ್ರಮ ಪಡುವ ಮೂಲಕ ಪರಿಸರ ಪ್ರೇಮ ಮೆರದು ಇತರರಿಗೆ ಮಾದರಿಯಾಗಿದ್ದಾರೆ. ಹಾಗೆ ನೋಡಿದರೆ ತೆರಕಣಾಂಬಿ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆ ಬೆಟ್ಟದ ಮೇಲೆ ಸುಂದರ ಪರಿಸರದಲ್ಲಿ ನೆಲೆನಿಂತಿದೆ. ಇಲ್ಲಿನ ಬೆಟ್ಟಗುಡ್ಡದಲ್ಲಿ ನೂರಾರು ಗಿಡಮರಗಳಿವೆ. ಜತೆಗೆ ಶಾಲಾ ಆವರಣದಲ್ಲಿ ಮಕ್ಕಳು ನೂರಾರು ಗಿಡಮರ ಬೆಳೆಸಿದ್ದಾರೆ. ಈ ಮರ ಗಿಡಗಳ ಗಣತಿಯನ್ನು ಮಾಡುವ ಮೂಲಕ ಗಿಡಮರಗಳ ಗಣತಿಯನ್ನು ಆಚರಿಸಲಾಯಿತು.
ಅಂತಾರಾಷ್ಟ್ರೀಯ ಪ್ರಶಸ್ತಿ ವಿಜೇತ ವನ್ಯಜೀವಿ ಛಾಯಾಗ್ರಾಹಕ ಆರ್.ಕೆ. ಮಧುರ ಅವರ ಮಾರ್ಗದರ್ಶನದಲ್ಲಿ ಗಣತಿ ಕಾರ್ಯ ನಡೆಯಿತು. ಇದೇ ಸಂದರ್ಭ ಸಸ್ಯಗಳ ಹುಟ್ಟು ಹಬ್ಬವನ್ನು ಆಚರಿಸಿದ್ದು ವಿಶೇಷವಾಗಿತ್ತು. ಗಿಡ ಮರಗಳಿಗೆ ಮಕ್ಕಳ ಕೈಯಲ್ಲಿ ಪೂಜೆಮಾಡಿಸಿ ಕೇಕ್ ಕಟ್ ಮಾಡಿಸುವ ಮೂಲಕ ಈ ಹುಟ್ಟು ಹಬ್ಬಕ್ಕೆ ಚಾಲನೆ ನೀಡಲಾಯಿತು. ಅಷ್ಟೇ ಅಲ್ಲದೆ ಮಕ್ಕಳಲ್ಲಿ ಪರಿಸರ ಜಾಗೃತಿ ಮೂಡಿಸಲಾಯಿತು. ಆ ನಂತರ ಶಾಲೆಯ ಸುತ್ತಮುತ್ತ ಇರುವ ಗಿಡಮರಗಳ ಗಣತಿ ಕಾರ್ಯ ಆರಂಭಿಸಿ ಮಕ್ಕಳು ಗಣತಿ ಮಾಡಿದರು. ಈ ಸಂದರ್ಭ ತೇಗ, ಹೊಂಗೆ, ಅತ್ತಿಮರ, ನೇರಳೆ, ಬೆಟ್ಟದ ನೆಲ್ಲಿ ಹಲಸು, ಮುತ್ತುಗ, ಕತ್ತಿಕಾಯಿ, ತಬೂಬಿಯಾ, ಮುಂತಾದ 280 ದೊಡ್ಡ ಮರಗಳು, 720 ಸಣ್ಣ ಸಸಿಗಳು, ತೋಟಗಾರಿಕೆ ಬೆಳೆಗಳಾದ ಸಪೋಟ, ಪರಂಗಿ, ಸೀತಾಫಲ, ಸೀಬೆ, ದಾಳಿಂಬೆ ಮುಂತಾದ 66 ಗಿಡಗಳು, ದಾಸವಾಳ, ಅರಸಿನ ಹೂ, ಅಲಮೆಂಡಾ ಮುಂತಾದ 28 ಹೂವಿನ ಗಿಡಗಳೂ ಹಾಗೂ ಗೋಲ್ಡನ್ ಸೈಪ್ರಸ್, ಆನೆಕಿವಿ, ಕಿವುಡುಜಲ್ಲೆ ಮುಂತಾದ 81 ಅಲಂಕಾರಿಕ ಗಿಡಗಳು ಲೆಕ್ಕಕ್ಕೆ ಸಿಕ್ಕಿವೆ.
ಈ ಗಿಡಮರಗಳು ಶಾಲೆಯ ಆವರಣದ ಅಂದವನ್ನು ಹೆಚ್ಚಿಸಿರುವುದಂತು ನಿಜ. ಮಕ್ಕಳು ಪ್ರತಿವರ್ಷವೂ ಪರಿಸರ ದಿನಾಚರಣೆ ಸಂದರ್ಭ ಗಿಡನೆಡುತ್ತಾರೆ. ಅಷ್ಟೇ ಅಲ್ಲದೆ ಅವುಗಳನ್ನು ಜತನದಿಂದ ನೀರೆರೆದು ಪೋಷಿಸುತ್ತಾರೆ. ಜತೆಗೆ ಅವುಗಳಿಗೆ ಹುಟ್ಟುಹಬ್ಬ ಮಾಡಿ ಸಂಭ್ರಮಿಸುತ್ತಾರೆ. ಪ್ರತಿವರ್ಷ ವನಮಹೋತ್ಸವದ ಸಂದರ್ಭ ಲಕ್ಷ ಲಕ್ಷ ಗಿಡನೆಡುವ ಮಂದಿ ಇದೇ ರೀತಿ ನೆಟ್ಟ ಗಿಡವನ್ನು ಪೋಷಿಸಿದ್ದರೆ ಪ್ರತಿ ವರ್ಷ ಗಿಡನೆಡುವ ಪ್ರಮೇಯ ಬರುತ್ತಿರಲಿಲ್ಲವೇನೋ? ಅದು ಏನೇ ಇರಲಿ ಮಕ್ಕಳ ಪರಿಸರ ಕಾಳಜಿಯನ್ನು ಎಲ್ಲರೂ ಮೆಚ್ಚಲೇ ಬೇಕು.