ಚಾಮರಾಜನಗರ: ಬಂಡೀಪುರ ರಾಷ್ಟ್ರೀಯ ಉದ್ಯಾನದ ಹುಲಿ ಪ್ರಿನ್ಸ್ ಗಡಿಕಾದಾಟದಲ್ಲಿ ಗಾಯಗೊಂಡಿರುವ ಘಟನೆ ಬೆಳಕಿಗೆ ಬಂದಿದೆ.
ಈ ಹುಲಿ ಬಂಡೀಪುರಕ್ಕೆ ತೆರಳಿದವರಿಗೆ ಚಿರಪರಿಚಿತ ಹುಲಿಯಾಗಿದ್ದು, ತನ್ನ ಗಡಿದಾಟಿ ತೆರಳಿದ ಸಂದರ್ಭ ಮತ್ತೊಂದು ಮಾದೇಶ ಎಂಬ ಹುಲಿಯೊಂದಿಗೆ ಕಾದಾಡಿದೆ ಎನ್ನಲಾಗಿದೆ. ಕಾದಾಟದಲ್ಲಿ ಪ್ರಿನ್ಸ್ ಹುಲಿಯ ತಲೆಯ ಬಲಭಾಗಕ್ಕೆ ಮತ್ತು ಕೈಗಳಿಗೆ ಗಾಯಗಳಾಗಿದೆ. ಹೀಗಾಗಿ ಪ್ರಿನ್ಸ್ ಹುಲಿ ಬಂಡೀಪುರದ ಮಂಗಲ ಮತ್ತು ಮೂಲಾಪುರ ಕೆರೆ ಬಳಿ ಕಳೆದೆರಡು ದಿನಗಳಿಂದ ಮಲಗಿದ್ದು, ಇದನ್ನು ಗಮನಿಸಿ ಪರಿಶೀಲಿಸಿದಾಗ ಮತ್ತೊಂದು ಹುಲಿಯೊಂದಿಗೆ ಕಾದಾಡಿಯಿರುವುದು ಗೊತ್ತಾಗಿದೆ.
ಪ್ರಿನ್ಸ್ ಬಗ್ಗೆ ಜನರಿಗೆ ಕುತೂಹಲವಿದ್ದು ಇದನ್ನು ನೋಡುವುದಕ್ಕಾಗಿಯೇ ಪ್ರವಾಸಿಗರು ಇಲ್ಲಿಗೆ ಬರುತ್ತಾರೆ. ಇದರಿಂದ ಆದಾಯವೂ ಹೆಚ್ಚುತ್ತಿದೆ ಎನ್ನಲಾಗಿದೆ. ಸದ್ಯ ಗಾಯಗೊಂಡಿರುವ ಕಾರಣದಿಂದ ಪ್ರಿನ್ಸ್ ಚಟುವಟಿಕೆಯಿಂದ ದೂರವಾಗಿದ್ದು ಮಲಗಿ ವಿಶ್ರಾಂತಿ ಪಡೆಯುತ್ತಿದೆ. ಆದರೆ ಜೀವಕ್ಕೇನು ಅಪಾಯವಿಲ್ಲ ಎನ್ನಲಾಗಿದೆ.