ಮಡಿಕೇರಿ: ಸುಪ್ರೀಂ ಕೋರ್ಟ್ ಆದೇಶದಂತೆ ದೇಶದಾದ್ಯಂತ ವೈದ್ಯಕೀಯ ಕಾಲೇಜುಗಳಿಗೆ ಏಕರೂಪದ ಪ್ರವೇಶಕ್ಕಾಗಿ ಕೇಂದ್ರ ಸರ್ಕಾರ ‘ನೀಟ್’ ಪರೀಕ್ಷೆ ನಡೆಸಲು ಮುಂದಾಗಿದ್ದು, ಇದರಲ್ಲಿ ಕನ್ನಡ ಭಾಷೆಯಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡದೆ ಇರುವುದು ಅತ್ಯಂತ ಖಂಡನೀಯವೆಂದು ಆಮ್ ಆದ್ಮಿ ಪಾರ್ಟಿಯ ಜಿಲ್ಲಾ ಘಟಕ ಅಸಮಾಧಾನ ವ್ಯಕ್ತಪಡಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಕ್ಷದ ಸಹ ಸಂಚಾಲಕ ಮಂಜುನಾಥ್, ಕೇಂದ್ರದ ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರ ನೀಟ್ ಪರೀಕ್ಷೆಗಾಗಿ ಹಲವು ಕಾನೂನು ತಿದ್ದುಪಡಿಗಳನ್ನು ಮಾಡಿ, ಏಳು ಭಾಷೆಗಳಲ್ಲಿ ಪರೀಕ್ಷೆ ಬರೆಯಲು ದೇಶದ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಿದೆ. ಇಂಗ್ಲೀಷ್ ಅಲ್ಲದೆ, ತಮಿಳು, ಹಿಂದಿ, ಅಸ್ಸಾಮಿ, ಬಂಗಾಳಿ, ಗುಜರಾತಿ, ಮರಾಠಿ ಹಾಗೂ ತೆಲುಗು ಭಾಷೆಯಲ್ಲಿ ನೀಟ್ ಪರೀಕ್ಷೆ ಬರೆಯಬಹುದಾಗಿದೆ. ಆದರೆ ಪ್ರಾಚೀನ ಭಾಷೆಯಾದ ಕನ್ನಡವನ್ನು ಕೇಂದ್ರ ಸರ್ಕಾರ ಕೈಬಿಟ್ಟಿದ್ದು, ಇದು ಕರ್ನಾಟಕಕ್ಕೆ ಆಗಿರುವ ಅನ್ಯಾಯವೆಂದು ಮಂಜುನಾಥ್ ಟೀಕಿಸಿದರು.
ದೇಶದಲ್ಲೆ ಅತೀ ಹೆಚ್ಚು ವೈದ್ಯಕೀಯ ಕಾಲೇಜುಗಳನ್ನು ಹೊಂದಿರುವ ರಾಜ್ಯ ಕರ್ನಾಟಕವಾಗಿದ್ದರೂ ಇಲ್ಲಿನ ವಿದ್ಯಾರ್ಥಿಗಳಿಗೆ ಕೇಂದ್ರ ಸರ್ಕಾರ ಅನ್ಯಾಯ ಮಾಡಿದೆ. ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರ ಪರಸ್ಪರ ಗೂಬೆ ಕೂರಿಸುವ ಕಾರ್ಯದಲ್ಲಿ ತೊಡಗಿದ್ದು, ಇದರಿಂದ ಕನ್ನಡಿಗರು ಬಡವಾಗುತ್ತಿದ್ದಾರೆ. ಎಂಟು ಜ್ಞಾನಪೀಠ ಪ್ರಶಸ್ತಿ ಪಡೆದ ಕರ್ನಾಟಕದ ಪ್ರಾಚೀನ ಭಾಷೆ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನ ಮಾನ ನೀಡಿದ್ದರೂ ಇದಕ್ಕೆ ಪೂರಕವಾಗಿ ಕೇಂದ್ರ ಸಕರ್ಾರದಿಂದ ಅಗತ್ಯ ಸಹಕಾರ ದೊರಕುತ್ತಿಲ್ಲ. ಅಸ್ಸಾಂ ಭಾಷೆಗೆ ಮಣೆ ಹಾಕಿರುವ ಕೇಂದ್ರ ಸರ್ಕಾರ ಕನ್ನಡ ಭಾಷೆಯನ್ನು ಕಡೆಗಣಿಸಿರುವ ಧೋರಣೆಯನ್ನು ಖಂಡಿಸಿ ಕೊಡಗು ಸೇರಿದಂತೆ ರಾಜ್ಯದ ಮೂವತ್ತು ಜಿಲ್ಲೆಗಳಲ್ಲಿ ಆಮ್ ಆದ್ಮಿ ಪಾರ್ಟಿ ಡಿ.29 ರಂದು ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದೆ ಎಂದರು.
ಕನ್ನಡದ ಬಗ್ಗೆ ಮಲತಾಯಿ ಧೋರಣೆ ತೋರದೆ 2017 ರಲ್ಲಿ ನೀಟ್ ಪರೀಕ್ಷೆಯನ್ನು ಕನ್ನಡದಲ್ಲಿ ಬರೆಯಲು ಕೇಂದ್ರದ ಆರೋಗ್ಯ ಸಚಿವರು ಅವಕಾಶ ನೀಡಬೇಕೆಂದು ಒತ್ತಾಯಿಸಿದರು. ರಾಜ್ಯದ ರಾಜಕಾರಣಿಗಳ ಇಚ್ಛಾ ಶಕ್ತಿಯ ಕೊರತೆಯೇ ಕನ್ನಡ ಭಾಷೆಗೆ ಈ ದುರ್ಗತಿ ಬರಲು ಕಾರಣವೆಂದು ಮಂಜುನಾಥ್ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಚಾಲಕರಾದ ಮುಕ್ಕಾಟಿರ ಅಪ್ಪಯ್ಯ, ಪ್ರಮುಖರಾದ ಬಾಲಸುಬ್ರಹ್ಮಣ್ಯ ಹಾಗೂ ಪೃಥ್ವಿ ಉಪಸ್ಥಿತರಿದ್ದರು.