ಚೆಟ್ಟಳ್ಳಿ: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಹಾಗು ಮೂರ್ನಾಡು ಕೊಡವ ಸಮಾಜ ಸಂಯುಕ್ತ ಆಶ್ರಯದಲ್ಲಿ ಕೊಯವ ಜನಾಂಗದ ಆಟ್ ಪಾಟ್ ಸಮಾರೋಪ ಸಮಾರಂಭ ನಡೆಯಿತು.
ಮೂರ್ನಾಡು ಕೊಡವ ಸಮಾಜದಲ್ಲಿ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಬಿದ್ದಾಟಂಡ ಎಸ್ ತಮ್ಮಯ್ಯನವರು ದೀಪ ಬೆಳಗುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭ ಮಾತನಾಡಿದ ಅವರು, ಹೆಣ್ಣು ಮಕ್ಕಳಿಂದಲೇ ಸಂಸ್ಕೃತಿ ಉಳಿಯಲು ಸಾಧ್ಯ. ಒಂದು ತಿಂಗಳು ಅಥವಾ 15 ದಿನಗಳಲ್ಲಿ ಆಟ್ ಪಾಟ್ ಕಲಿಯಲು ಸಾಧ್ಯವಾಗದಿದ್ದರೂ ಕೆಲಸ ಕಾರ್ಯವನ್ನೆಲ್ಲ ಬದಿಗೊತ್ತಿ ಕನಿಷ್ಠ 10ದಿವಸಗಳಾದರೂ ಆಟ್ ಪಾಟ್ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸುವುದರ ಮೂಲಕ ಸಂಸ್ಕೃತಿಯನ್ನು ಕಲಿಯಲು ಶ್ರಮವಹಿಸ ಬೇಕು ಎಂದರು.
ನಮ್ಮ ಭಾಷಿಕ ಜನಾಂಗದಲ್ಲಿ ಕನಿಷ್ಠ ಪಕ್ಷ 8 ಜನ ಹಾಡುಗಾರರನ್ನು ತಯಾರು ಮಾಡಿದಲ್ಲಿ ಅಕಾಡೆಮಿಯಿಂದ ಕೊಡವ ಸಂಸ್ಕೃತಿಯ ಧ್ಯೋತಕವಾದ ದುಡಿಯನ್ನು ನೀಡಲಾಗುವುದೆಂದರು. ಡಾ. ಮೇಚಿರ ಸುಭಾಶ್ ನಾಣಯ್ಯ, ಪಳಂಗಂಡ ಗಣೇಶ್, ಮೇಚುರ ಲಾಲಾ ಭೀಮಯ್ಯ ಮಾತನಾಡಿದರು. ಕೊಡವ ಜಾನಪದ ಕಲಾವಿದರಾದ ಪಾಂಡಂಡ ಸ್ವಾತಿ, ಮಂಡೆಪಂಡ ಶಶಿ, ಕುಂಜಿಲಂಡ ಗ್ರೇಸಿ ಅವರನ್ನು ಶಾಲುಹೊದಿಸಿ ಸನ್ಮಾನಿಸಲಾಯಿತು.