ಹಳೆ ವರ್ಷಕ್ಕೆ ಗುಡ್ ಬೈ ಹೇಳಿ ನೂತನ ವರ್ಷ ಬರೋ ಮಾಡಿಕೊಳ್ಳೋದಕ್ಕೆ ಎಲ್ಲರೂ ಕಾತುರರಾಗಿದ್ದಾರೆ. ರಾಜ್ಯದ ಮೂಲೆ ಮೂಲೆಯಿಂದ ಪ್ರವಾಸಿಗರು ಹೊಸ ವರ್ಷ ಆಚರಣೆಗೆ ಚಿಕ್ಕಮಗಳೂರಿನ ಪ್ರವಾಸಿ ತಾಣಗಳಿಗೆ ಆಗಮಿಸುತ್ತಿದ್ದು ತಣ್ಣನೆಯ ಗಾಳಿ, ಸ್ವಚ್ಚಂದ ವಾತಾವರಣದಲ್ಲಿ ಹಚ್ಚ ಹಸಿರಿನಿಂದ ಕಂಗೊಳಿಸ್ತಿರೋ ಕಾಫಿನಾಡು ಚಿಕ್ಕಮಗಳೂರಿನ ಕಡೆ ಪ್ರಯಾಣ ಬೆಳೆಸುತ್ತಿದ್ದಾರೆ.
ಮುಳ್ಳಯ್ಯನಗಿರಿ ಸೇರಿದಂತೆ ಹತ್ತು ಹಲವಾರು ಪ್ರಕೃತಿ ಸೌಂದರ್ಯದ ಮಧ್ಯೆ ಹೊಸ ವರ್ಷದ ಆಚರಣೆಗೆ ತಯಾರಿ ಮಾಡಿಕೊಳ್ಳುತ್ತಿರುವ ಕುರಿತು ಒಂದು ವರದಿ ಇಲ್ಲಿದೇ ನೋಡಿ…
ಹೌದು.. 2016 ಗೆ ಗುಡ್ ಬೈ ಹೇಳಿ 2017 ರ ನೂತನ ವರ್ಷ ಸ್ವಾಗತಿಸಲು ಪ್ರತಿಯೊಬ್ಬರೂ ಕಾತುರರಾಗಿದ್ದಾರೆ. ರಾಜ್ಯದ ಅತ್ಯಂತ ಎತ್ತರದ ಶಿಖರವೆಂಬ ಕೀರ್ತಿಗೆ ಭಾಜನವಾಗಿರೋ ಕಾಫಿನಾಡಿನ ಮುಳ್ಳಯ್ಯನ ಗಿರಿ ಸೇರಿದಂತೆ ಪ್ರಕೃತಿಯ ಮಡಿಲಲ್ಲಿ ಸ್ವಚ್ಚವಾದ ಗಾಳಿಯ ನಡುವೆ ನೂರಾರು ಪ್ರವಾಸಿಗರು. ವರ್ಷದ ಸಂಭ್ರಮಚಾರಣೆ ಮಾಡಲು ರಾಜ್ಯದ ನಾನಾ ಭಾಗಗಳಿಂದ ಆಗಮಿಸುತ್ತಿದ್ದು ಪ್ರವಾಸಿಗರಿಂದ ಚಿಕ್ಕಮಗಳೂರು ಜಿಲ್ಲೆ ತುಂಬಿ ತುಳುಕುತ್ತಿದೆ.
ಕೆಮ್ಮಣ್ಣುಗುಂಡಿ, ಕಲ್ಲತ್ತಿಗಿರಿ, ದತ್ತಾಫೀಠ, ಕವಿಕಲ್ ಗಂಡಿ, ಸೀತಾಳಯ್ಯನ ಗಿರಿ ಸೇರಿದಂತೆ ವಿವಿಧ ಪ್ರವಾಸಿ ತಾಣಗಳಿಗೆ ರಾಜ್ಯದ ನಾನಾ ಭಾಗಗಳಿಂದ ಸಾವಿರಾರು ಪ್ರವಾಸಿಗರು ಆಗಮಿಸುತ್ತಿದ್ದಾರೆ. ಕಳೆದೆರಡು ದಿನಗಳ ಹಿಂದೆಯೇ ಜಿಲ್ಲೆಯ ಪ್ರವಾಸಿ ಸ್ಥಳಗಳಿಗೆ ಆಗಮಿಸಿದ್ದ ಪ್ರವಾಸಿಗರು ಸ್ವಚ್ಚವಾದ ಪ್ರಕೃತಿ ಮಡಿಲಲ್ಲಿ ಕಾಲ ಕಳೆಯುತ್ತಿದ್ದಾರೆ. ಹೊಸ ವರ್ಷಕ್ಕಾಗಿ ಕಾಯುತ್ತಿದ್ದಾರೆ.
ಚಿಕ್ಕಮಗಳೂರಿನ ಪ್ರವಾಸಿ ತಾಣಗಳಿಗೆ ವರ್ಷಪೂರ್ತಿ ಪ್ರವಾಸಿಗರು ಬರ್ತಾರೆ, ಇಲ್ಲಿನ ಪ್ರಕೃತಿ ಸೌಂದರ್ಯಕ್ಕೆ ಹಿಡಿದ ಕೈಗನ್ನಡಿ ಅಂದ್ರೆ ತಪ್ಪಲ್ಲ. ಯಾಕಂದ್ರೆ, ರಾಜ್ಯದ ನಾನಾ ಭಾಗಗಳಿಂದ ಬಂದಿದ್ದ, ಪ್ರವಾಸಿಗರು ಅತ್ಯಂತ ಎತ್ತರದ ಶಿಖರದಲ್ಲಿ ನಿಂತು ಪ್ರತಿ ಕ್ಷಣಕ್ಕೊಮ್ಮೆ ಬದಾಲವಣೆ ಆಗುವ ಪರಿಸರವನ್ನು ಕಂಡು ಸಂತೋಷ ಪಡುತ್ತಿದ್ದಾರೆ. ಎತ್ತರದ ಗಿರಿಯ ಮೇಲೆ ನಿಂತು ಮೋಡಗಳಿಗೆ ಮುತ್ತಿಕ್ಕುತ್ತಿದ್ದಾರೆ. ಸ್ನೇಹಿತರು, ಕುಟುಂಬ ವರ್ಗ, ಪ್ರೇಮಿಗಳು ಎನ್ನದೇ ಪ್ರತಿಯೊಬ್ಬರು ಇಲ್ಲಿನ ಪ್ರಾಕೃತಿಕ ಸೌಂದರ್ಯದಲ್ಲಿ ಮಿಂದು ತಮ್ಮದೇ ಲೋಕದಲ್ಲಿ ಕಳೆದು ಹೋಗುತ್ತಿದ್ದಾರೆ. ವೀಕ್ ಎಂಡ್ ಬೇರೆ ವರ್ಷದ ಕೊನೆಯಲ್ಲಿ ಬಂದಿರೋದರಿಂದ ಪ್ರವಾಸಿಗರ ಸಂಖ್ಯೆಯಲ್ಲಿಯೂ ಅಧಿಕವಾಗಿದೆ.
ಜಿಲ್ಲೆಯಲ್ಲಿ 1500 ಸಾವಿರಕ್ಕೂ ಅಧಿಕ ಹೋಂ ಸ್ಟೇ ಗಳಿದ್ದು ಪ್ರತಿಯೊಂದು ಹೋಂ ಸ್ಟೇ ಭರ್ತಿಯಾಗಿದೆ. ಒಟ್ಟಾರೆಯಾಗಿ ಹೊಸ ವರ್ಷಕ್ಕೆ ಪ್ರವಾಸಿಗರ ದಂಡೇ ಚಿಕ್ಕಮಗಳೂರಿಗೆ ಸಾವಿರಾರು ಸಂಖ್ಯೆಯಲ್ಲಿ ಹರಿದು ಬರುತ್ತಿದ್ದು ಜಿಲ್ಲೆಯ ಪ್ರತಿಯೊಂದು ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರದ್ದೇ ಕಾರುಬಾರಾಗಿದೆ. ಇಲ್ಲಿನ ಸೌಂದರ್ಯಕ್ಕೆ ಪ್ರತಿಯೊಬ್ಬರು ಸೋತು ಮಂತ್ರಮುಗ್ದರಾಗಿದ್ದಾರೆ.