ಮಂಡ್ಯ: ಎಲ್ಲೆಡೆ ಹೊಸವರ್ಷವನ್ನು ಸಡಗರ ಸಂಭ್ರಮದಿಂದ ಆಚರಿಸಿದರೆ ಅದ್ಯಾಕೋ ಮಂಡ್ಯದಲ್ಲಿ ಮಾತ್ರ ಬರೀ ಸಾವು ನೋವುಗಳೇ ಮೇಳೈಸಿವೆ ಇಲ್ಲಿ ಪ್ರತ್ಯೇಕ ಪ್ರಕರಣಗಳಲ್ಲಿ ಸುಮಾರು ಒಂಬತ್ತು ಮಂದಿ ಬಲಿಯಾಗಿದ್ದಾರೆ.
ಹೊಸ ವರ್ಷದ ಸಂಭ್ರಮಾಚರಣೆ ಮುಗಿಸಿ ಮದ್ದೂರು ಸಮೀಪದ ಹೊಟೇಲೊಂದಕ್ಕೆ ಊಟ ಮಾಡಲು ಕಾರಿನಲ್ಲಿ ತೆರಳುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿದ ಕಾರು ಶಿಂಷಾ ನದಿಗೆ ಉರುಳಿಬಿದ್ದ ಪರಿಣಾಮ ಮಂಡ್ಯದ ಗಾಂಧಿನಗರ ನಿವಾಸಿ, ಪತ್ರಕರ್ತ ಅಕ್ಮಲ್ ಪಾಷ (44) ಮೃತಪಟ್ಟು, ಕಾರಿನಲ್ಲಿದ್ದ ಲೋಕೇಶ, ಹರೀಶ, ಅಭಿನಂದನ್ ಗಾಯಗೊಂಡಿದ್ದಾರೆ.
ಇನ್ನು ಹೊಸ ವರ್ಷದ ಪಾರ್ಟಿ ಮುಗಿಸಿಕೊಂಡು ವಾಪಸ್ ತೆರಳುತ್ತಿದ್ದ ವೇಳೆ ಮಳವಳ್ಳಿ ತಾಲೂಕು ಹಲಗೂರು ಸಮೀಪದ ಶಿಂಷಾ ಸೇತುವೆ ಬಳಿ ಇಂಡಿಕಾ ಕಾರು ಮರಕ್ಕೆ ಡಿಕ್ಕಿ ಹೊಡೆದು ಹಳ್ಳಕ್ಕೆ ಉರುಳಿಬಿದ್ದ ಪರಿಣಾಮ ಬೆಂಗಳೂರಿನ ಬನಶಂಕರಿ ನಿವಾಸಿ ಪ್ರಶಾಂತ್ ಕುಮಾರ್ (23) ಮೃತ ಪಟ್ಟು, ಶಶಾಂಕ್, ನಟರಾಜು ಎಂಬುವರು ಗಾಯಗೊಂಡಿದ್ದಾರೆ.
ಶ್ರೀರಂಗಪಟ್ಟಣ ಸಮೀಪದ ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ಬೈಕ್ ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಸವಾರರಾದ ಬಾಬುರಾಯನಕೊಪ್ಪಲು ಗ್ರಾಮ ಪಂಚಾಯಿತಿ ಸದಸ್ಯ ಶೇಷೇಗೌಡ (59) ಹಾಗೂ ಶ್ರೀಧರ್ (50) ಮೃತಪಟ್ಟಿದ್ದಾರೆ.
ಹೊಸ ವರ್ಷದ ಆಚರಣೆ ಮುಗಿಸಿಕೊಂಡು ಮುಂಜಾನೆ ಮೂರು ಗಂಟೆ ಸಮಯದಲ್ಲಿ ವಾಪಸ್ ಬೈಕ್ ನಲ್ಲಿ ಬರುತ್ತಿದ್ದ ಕೆ.ಆರ್. ಪೇಟೆ ತಾಲೂಕಿನ ಮುರುಕನಹಳ್ಳಿ ಗ್ರಾಮದ ನಿವಾಸಿ, ಶ್ರವಣಬೆಳಗೊಳದ ಬಾಹುಬಲಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಅಂತಿಮ ಬಿಇ ವ್ಯಾಸಂಗ ಮಾಡುತ್ತಿದ್ದ ಚೇತನ್ (20) ಆಯತಪ್ಪಿ ಬಿದ್ದು ಮೃತಪಟ್ಟಿರುವ ಘಟನೆ ಕೆ.ಆರ್. ಪೇಟೆ ತಾಲೂಕಿನ ಹೊಸಹಳ್ಳಿ ಬಳಿ ನಡೆದಿದೆ.
ಹಳೇ ದ್ವೇಷದ ಹಿನ್ನೆಲೆಯಲ್ಲಿ ಜೆಡಿಎಸ್ ಕಾರ್ಯಕರ್ತ ಹರೀಶ ಅಲಿಯಾಸ್ ಗುಂಡ (32) ಎಂಬಾತನ ಹತ್ಯೆ ನಡೆದಿರುವ ಘಟನೆ ಕೆ.ಆರ್. ಪೇಟೆ ತಾಲೂಕಿನ ಮುರುಕನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಕುಡಿದ ಮತ್ತಿನಲ್ಲಿ ಸ್ನೇಹಿತರಿಬ್ಬರ ಜಗಳ ವಿಕೋಪಕ್ಕೆ ತಿರುಗಿದ ಪರಿಣಾಮ ಒಬ್ಬಾತ ರಿಪೀಸ್ ಪಟ್ಟಿಯಿಂದ ಹಲ್ಲೆ ನಡೆಸಿ ಹತ್ಯೆಗೈದರೆ, ಹತ್ಯೆಯಿಂದ ಮನನೊಂದು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಳವಳ್ಳಿ ತಾಲೂಕಿನ ಹೊಸಹಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಮಹೇಶ (38) ಹಾಗೂ ರಾಜೇಶ (40) ಎಂಬುವರೇ ಮೃತಪಟ್ಟವರಾಗಿದ್ದಾರೆ. ಗ್ರಾಮದ ರಾಜೇಶ ಮತ್ತು ಮಹೇಶ ಇಬ್ಬರೂ ಪ್ರಾಣ ಸ್ನೇಹಿತರಾಗಿದ್ದರು. ರಾಜೇಶ ಬೆಂಗಳೂರಿನಲ್ಲಿ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದ, ಒಂದು ತಿಂಗಳ ಹಿಂದೆಯಷ್ಟೇ ಗ್ರಾಮಕ್ಕೆ ವಾಪಸ್ಸಾಗಿದ್ದ. ಶನಿವಾರ ರಾತ್ರಿ ಇಬ್ಬರೂ ಗ್ರಾಮದ ಬಸ್ ನಿಲ್ದಾಣದ ಬಳಿ ಇರುವ ಅಂಗಡಿಯಲ್ಲಿ ಮದ್ಯ ಸೇವಿಸಿದ್ದರು. ಈ ವೇಳೆ ಅತಿಯಾಗಿ ಕುಡಿದಿದ್ದ ಮಹೇಶ ಗಲಾಟೆ ಮಾಡುತ್ತಿದ್ದ. ಆತನನ್ನು ಸಮಾಧಾನಪಡಿಸಿ ಮನೆಗೆ ರಾಜೇಶ ಕರೆತರುತ್ತಿದ್ದ. ಇಬ್ಬರ ಜಗಳ ವಿಕೋಪಕ್ಕೆ ತಿರುಗಿದ ಪರಿಣಾಮ ಸಮೀಪದ ಕುಂಬಾರರ ಕಟ್ಟೆ ಬಳಿ ರಾಜೇಶ ಮಹೇಶನ ತಲೆಗೆ ರಿಪೀಸ್ ಪಟ್ಟಿಯಿಂದ ಹಲ್ಲೆ ನಡೆಸಿದ್ದ. ಮಹೇಶ ತೀವ್ರ ರಕ್ತಸ್ತ್ರಾವದಿಂದ ಕುಸಿದುಬಿದಿದ್ದ. ಗ್ರಾಮಸ್ಥರು ಆತನನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದರಲ್ಲದೆ, ಹೆಚ್ಚಿನ ಚಿಕಿತ್ಸೆಗಾಗಿ ಮಂಡ್ಯ, ಬೆಂಗಳೂರಿಗೆ ಕರೆದೊಯ್ಯಲಾಯಿತು. ಮತ್ತೆ ವಾಪಸ್ಸು ಮಂಡ್ಯಕ್ಕೆ ಕರೆತರುತ್ತಿದ್ದ ವೇಳೆ ಮಾರ್ಗ ಮಧ್ಯೆ ಮೃತಪಟ್ಟಿದ್ದಾನೆ.
ಗಲಾಟೆ ನಂತರ ರಾಜೇಶ ಮನೆಗೆ ಹೋಗಿ ಮಲಗಿದ್ದ. ಎಚ್ಚರವಾದಾಗ ಮಹೇಶ ಮೃತಪಟ್ಟಿರುವ ಸುದ್ದಿ ತಿಳಿದು ಮನನೊಂದು ತಾನೂ ಸಹ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಬೆಂಗಳೂರು ವಿಶೇಷ ಭೂಸ್ವಾಧೀನಾಧಿಕಾರಿ ಕೆ.ಎ.ಎಸ್. ಅಧಿಕಾರಿ ಭೀಮಾನಾಯಕ ನ ಕಾರು ಚಾಲಕನಾಗಿದ್ದ, ಇತ್ತೀಚೆಗೆ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ರಮೇಶ್ ಎಂಬಾತನ ತಂದೆ ಚಿಕ್ಕಹೊಂಬಾಳೆಗೌಡ ಮದ್ದೂರು ತಾಲೂಕು ಕಾಡುಕೊತ್ತನಹಳ್ಳಿ ಗ್ರಾಮದ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ