ಮಂಡ್ಯ: ಮಂಡ್ಯದಲ್ಲಿ ಕಳೆದ ಕೆಲವು ದಿನಗಳಿಂದ ಮೇಲಿಂದ ರಾಜಕೀಯ ದ್ವೇಷಕ್ಕೆ ನಡೆಯುತ್ತಿರುವ ಕೊಲೆಗಳು ಭಯಹುಟ್ಟಿಸಿವೆ.
ಈಗಾಗಲೇ ಮೂವರು ಜೆಡಿಎಸ್ ಕಾರ್ಯಕರ್ತರು ರಾಜಕೀಯ ದ್ವೇಷಕ್ಕೆ ಬಲಿಯಾಗಿದ್ದಾರೆ. ಇದೀಗ ಕೆ.ಆರ್.ಪೇಟೆ ತಾಲೂಕು ಮುರುಕನಹಳ್ಳಿಯಲ್ಲಿ ಜೆಡಿಎಸ್ ಕಾರ್ಯಕರ್ತ ಹರೀಶ್ ಅಲಿಯಾಸ್ ಗುಂಡ (32) ಎಂಬಾತನ ಹತ್ಯೆ ನಡೆದಿದ್ದು ಇಡೀ ಗ್ರಾಮದ ಸುತ್ತಮುತ್ತ ಭಯದ ವಾತಾವರಣ ನಿರ್ಮಾಣವಾಗಿದೆ.
ಯಾರು ಯಾವಾಗ ಯಾರನ್ನು ಹತ್ಯೆಗೈಯ್ಯತ್ತಾರೋ ಎಂಬ ಭಯದಲ್ಲಿ ಜನತೆ ಜೀವಿಸುವಂತಾಗಿದೆ. ಹರೀಶ್ ನನ್ನು ಕೊಲೆ ಮಾಡಿದ ಹಂತಕರಾದ ಕಾಂಗ್ರೆಸ್ ಕಾರ್ಯಕರ್ತರು ಎನ್ನಲಾದ ಯೋಗೇಶ್ ಹಾಗೂ ರಕ್ಷಿತ್ ತಲೆಮರೆಸಿಕೊಂಡಿದ್ದಾರೆ.
ಆದರೆ ರೊಚ್ಚಿಗೆದ್ದ ಜನ ಕಾಂಗ್ರೆಸ್ ಕಾರ್ಯಕರ್ತರ ಎರಡು ಮನೆಗಳಿಗೆ ಬೆಂಕಿ ಹಚ್ಚಿದ್ದ ಪರಿಣಾಮ ಒಂದು ಎತ್ತಿನಗಾಡಿ, ಟಾಟಾ ಏಸ್, ಒಂದು ಅಶೋಕ್ ಲೈಲ್ಯಾಂಡ್ ವಾಹನ ಸುಟ್ಟು ಕರಕಲಾಗಿದೆ. ಅಷ್ಟಕ್ಕೆ ಸುಮ್ಮನಾಗದ ಉದ್ರಿಕ್ತರು ನಿಯಂತ್ರಿಸಲು ಬಂದ ಡಿವೈಎಸ್ಪಿ ಜನಾರ್ದನ್ ಅವರ ಮೇಲೆಯೂ ಕಾರದ ಪುಡಿ ಎರಚಿದ್ದಾರೆ.
ಘಟನಾ ಸ್ಥಳಕ್ಕೆ ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ರವಿ ಚನ್ನಣ್ಣನವರ್ ಭೇಟಿ ನೀಡಿ ಮಂಡ್ಯ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಡಾ.ಸವಿತಾ ಅವರಿಂದ ಮಾಹಿತಿ ಪಡೆದು ಅಹಿತಕರ ಘಟನೆಗಳು ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಿದ್ದಾರಲ್ಲದೆ, ಆರೋಪಿಗಳ ಬಂಧನಕ್ಕೆ ಕ್ರಮ ವಹಿಸುವಂತೆ ಸೂಚಿಸಿದ್ದಾರೆ.
ಕೆ.ಆರ್.ಪೇಟೆ ಗ್ರಾಮಾಂತರ ಠಾಣೆಯ ಪೊಲೀಸರು ಪರಾರಿಯಾಗಿರುವ ಆರೋಪಿಗಳ ಪತ್ತೆಗಾಗಿ ಎರಡು ತಂಡವನ್ನು ರಚಿಸಿದ್ದಾರೆ. ಸ್ಥಳದಲ್ಲಿ ಡಿಎಆರ್ ಪೋಲಿಸ್ ತುಕಡಿಗಳು ಸೇರಿದಂತೆ ನಾಗಮಂಗಲ, ಶ್ರೀರಂಗಪಟ್ಟಣ, ಶ್ರವಣಬೆಳಗೊಳ, ಚನ್ನರಾಯಪಟ್ಟಣ, ಪಾಂಡವಪುರ ಹಾಗೂ ಮೈಸೂರಿನಿಂದ ಹೆಚ್ಚುವರಿಯಾಗಿ ಪೋಲಿಸ್ ಪಡೆಯನ್ನು ನಿಯೋಜಿಸಲಾಗಿದೆ. ಈ ನಡುವೆ ಮೈಸೂರು ದಕ್ಷಿಣ ವಲಯ ಐಜಿಪಿ ಬಿ.ಕೆ.ಸಿಂಗ್ ಮುರುಕನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಮಂಡ್ಯದಲ್ಲಿ ಕೊಲೆಗಳು ನಡೆಯಲು ಪೊಲೀಸ್ ಇಲಾಖೆಯ ವೈಫಲ್ಯ ಕಾರಣ ಎಂಬ ಆರೋಪಗಳು ಕೇಳಿ ಬರುತ್ತಿವೆ.
ಈ ನಡುವೆ ಸಂಸದ ಸಿ.ಎಸ್.ಪುಟ್ಟರಾಜು ಮುರುಕನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಕೊಲೆಯಾದ ಹರೀಶ್ ಅವರ ಸಂಬಂಧಿಗಳು ಹಾಗೂ ತಾ.ಪಂ. ಸ್ಥಾಯಿ ಸಮಿತಿಯ ಅಧ್ಯಕ್ಷ ವಿಜಯಕುಮಾರ್ ಅವರಿಂದ ಮಾಹಿತಿ ಪಡೆದರಲ್ಲದೆ, ಕಾಂಗ್ರೆಸ್ ಪಕ್ಷದ ಏಜೆಂಟರಂತೆ ಕೆಲಸ ಮಾಡುತ್ತಿರುವ ಡಿವೈಎಸ್ಪಿ ಜನಾರ್ದನ್ ಅವರ ಪಕ್ಷಪಾತಿ ಧೋರಣೆಯಿಂದ ಜೆಡಿಎಸ್ ಕಾರ್ಯಕರ್ತರು ಹತ್ಯೆಗೀಡಾಗಿದ್ದಾರೆ. ಈ ಕೊಲೆಗೆ ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಅವರ ಪುತ್ರ ಶ್ರೀಕಾಂತ್ ಅವರ ಕುಮ್ಮಕ್ಕೇ ನೇರ ಕಾರಣವಾಗಿದೆ ಎಂದು ಆರೋಪಿಸಿದ್ದಾರೆ.
ಒಟ್ಟಾರೆ ಮಂಡ್ಯ ಜಿಲ್ಲೆಯಲ್ಲಿ ಇತ್ತೀಚೆಗೆ ರಾಜಕೀಯ ದ್ವೇಷಕ್ಕೆ ಬಲಿಯಾಗುವವರ ಸಂಖ್ಯೆ ಹೆಚ್ಚಾಗಿದ್ದು, ಪೊಲೀಸರ ಇಲಾಖೆ ನಿಗಾವಹಿಸಿ ಪುಂಡರ ಮತ್ತು ಇಂತಹ ಪ್ರಕರಣಗಳಿಗೆ ಕುಮ್ಮಕ್ಕು ನೀಡುವವರತ್ತ ನಿಗಾ ವಹಿಸಬೇಕಾಗಿದೆ.