ಕೆ.ಆರ್.ನಗರ: ಪಟ್ಟಣ ಠಾಣೆಯ ಪೊಲೀಸರು ದಿಢೀರ್ ಕಾರ್ಯಾಚರಣೆ ನಡೆಸಿ ಅಕ್ರಮವಾಗಿ ಕಸಾಯಿ ಖಾನೆಗೆ ಸಾಗಾಟವಾಗುತ್ತಿದ್ದ 17 ಜಾನವಾರುಗಳನ್ನು ವಶಕ್ಕೆ ಪಡೆದಿರುವ ಘಟನೆ ತಾಲೂಕಿನ ಹೊಸೂರು-ಚುಂಚನಕಟ್ಟೆ ರಸ್ತೆಯಲ್ಲಿ ಮಂಗಳವಾರ ನಡೆದಿದೆ.
ಪಿರಿಯಾಪಟ್ಟಣ ತಾಲೂಕಿನ ಅಡಗನಹಳ್ಳಿಯಿಂದ ಅಕ್ರಮವಾಗಿ ಜಾನುವಾರುಗಳನ್ನು ಸಾಗಾಣಿಕೆ ಮಾಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿಯ ಮೇರೆಗೆ ಹೊಸೂರು-ಚುಂಚನಕಟ್ಟೆ ರಸ್ತೆಯಲ್ಲಿ ಈಚರ್ ಕಂಟೇನರ್ ವಾಹನವನ್ನು ತಪಾಸಣೆಗೆ ಒಳಪಡಿಸಿದಾಗ ಅಕ್ರಮವಾಗಿ ಜಾನುವಾರು ಸಾಗಾಣಿಕೆ ಮಾಡುತ್ತಿರುವುದು ಪತ್ತೆಯಾಯಿತು. ತಕ್ಷಣವೇ ವಾಹನದ ಜೊತೆಗೆ ವಾಹನ ಚಾಲಕ ಮೈಸೂರಿನ ದಾದಾಪೀರ್, ಕ್ಲೀನರ್ ಕಲೀಂ ಅವರನ್ನು ಬಂಧಿಸಿದ ಕೆ.ಆರ್.ನಗರ ಠಾಣೆಯ ಪಿಎಸ್ಐ ಬೋರಶೆಟ್ಟಿ ಅವರು 13 ಹಸುಗಳು, 4 ಎಮ್ಮೆಗಳನ್ನು ವಶಕ್ಕೆ ತೆಗೆದುಕೊಂಡು ನಂತರ ಹಸು ಮತ್ತು ಎಮ್ಮೆಗಳನ್ನು ಮೈಸೂರಿನ ಪಿಂಜರ್ಪೋಲ್ಗೆ ರವಾನಿಸಲಾಯಿತು. ಈ ಸಂಬಂಧ ಕೆ.ಆರ್.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.