ಮಡಿಕೇರಿ: ದಿಡ್ಡಳ್ಳಿಯಲ್ಲಿ ನಿವೇಶನಕ್ಕೆ ಆಗ್ರಹಿಸಿ ನಡೆದ ಪ್ರತಿಭಟನೆಗಳಲ್ಲಿ ಪಾಲ್ಗೊಂಡು ಇದೀಗ ತಾತ್ಕಾಲಿಕ ಗುಡಿಸಲಿನಲ್ಲಿ ವಾಸವಿದ್ದ ಗಿರಿಜನ ವ್ಯಕ್ತಿಯೊಬ್ಬ ಭಾನುವಾರ ಬೆಳಗ್ಗೆ ಹೃದಯಾಘಾತದಿಂದ ಸಾವನ್ನಪ್ಪಿರುವ ವಿಚಾರ ಸಾಕಷ್ಟು ಊಹಾಪೋಹಗಳಿಗೆ ಗ್ರಾಸವಾದ ಘಟನೆ ನಡೆಯಿತು.
ಮೂಲತಃ ಪೊನ್ನಂಪೇಟೆಯ ತೂಚಮಕೇರಿಯ ನಿವಾಸಿಯಾದ ಯರವರ ನಂಜ(45) ಎಂಬಾತನೆ ಸಾವನ್ನಪ್ಪಿದ ದುರ್ದೈವಿಯಾಗಿದ್ದು, ಈತನ ಸಾವನ್ನು ಕಾರಣವಾಗಿಟ್ಟುಕೊಂಡು ದಿಡ್ಡಳ್ಳಿ ನಿವೇಶನ ಹೋರಾಟ ಸಮಿತಿಯ ಪ್ರಮುಖರು, ನಂಜ ತೂಚಮಕೇರಿಯ ತೋಟದ ಮಾಲೀಕರ ಬಳಿ 1.80 ಲಕ್ಷ ಸಾಲ ಮಾಡಿದ್ದಾನೆ. ಈ ಸಾಲ ಮರುಪಾವತಿಸಲು ಸಾಧ್ಯವಾಗದ್ದರಿಂದ ತೋಟ ಮಾಲೀಕ ನಂಜನ ಪತ್ನಿ ಮಕ್ಕಳನ್ನು ಅಲ್ಲಿಂದ ಹೊರ ಹೋಗಲು ಬಿಡುತ್ತಿಲ್ಲ. ಇದರಿಂದ ನೊಂದು ಬೇಸತ್ತ ನಂಜ ಹೃದಯಾಘಾತದಿಂದ ಸಾವನ್ನಪ್ಪಿರುವುದಾಗಿ ಆರೋಪಿಸಿದರು.
ನಂಜನ ಸಾವಿನ ಪ್ರಕರಣ ಗೊಂದಲವನ್ನು ಹುಟ್ಟುಹಾಕುವ ಸಾಧ್ಯತೆ ಅರಿತ ಪ್ರಭಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮುತ್ತುರಾಜ್, ಡಿವೈಎಸ್ಒಪಿ ಛಬ್ಬಿ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಬಿಗಿ ಬಂದೋಬಸ್ತ್ ಏರ್ಪಡಿಸಿದರು.
ಆದರೆ ಸ್ಥಳಕ್ಕೆ ಆಗಮಿಸಿದ ನಂಜನ ಪತ್ನಿ ಬೋಜಿ ಹೋರಾಟ ಸಮಿತಿಯ ಹೇಳಿಕೆಗೆ ತದ್ವಿರುದ್ಧವಾಗಿ ಉತ್ತರಿಸಿ ತಮ್ಮನ್ನು ತೋಟ ಮಾಲೀಕರು ಯೋಗ್ಯ ರೀತಿಯಲ್ಲಿ ನೋಡಿಕೊಳ್ಳುತ್ತಿದ್ದು, ಯಾವುದೇ ಸಮಸ್ಯೆಗಳಿಲ್ಲವೆಂದು ಹೇಳಿಕೆ ನೀಡಿದ್ದರಿಂದ ಪ್ರಕರಣ ಶಾಂತವಾಯಿತು.
ಭಾನುವಾರ ಬೆಳಗ್ಗೆ ನಂಜ ಸಾವನ್ನಪಿದ ಬಳಿಕದ ವಿದ್ಯಮಾನಗಳು ಮೃತದೇಹವನ್ನು ಆತನ ಕುಟುಂಬಸ್ಥರು ಪೊನ್ನಂಪೇಟೆಯ ತೂಚಮಕೇರಿಗೆ ಕೊಂಡೊಯ್ಯುವುದರೊಂದಿಗೆ ಕೊನೆಗೊಂಡಿತು.