ಮಡಿಕೇರಿ: ಕೊಡಗಿನ ವೀರ ಯೋಧ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರ ಹೆಸರನ್ನು ಇದೀಗ ದೆಹಲಿಯಲ್ಲಿರುವ ಆರ್ಮಿ ಪೆರೇಡ್ ಮೈದಾನಕ್ಕೆ ನಾಮಕರಣ ಮಾಡಲಾಗಿದೆ. ಇತ್ತೀಚೆಗೆ ಕಾರ್ಯಪ್ಪ ಅವರ ಪ್ರತಿಮೆ ಉದ್ಘಾಟಿಸಿ ಪೆರೇಡ್ ಮೈದಾನಕ್ಕೆ ಅವರ ಹೆಸರನ್ನು ಭೂ ಸೇನಾ ಮುಖ್ಯಸ್ಥರಾಗಿದ್ದ ಜನರಲ್ ದಲ್ಬೀರ್ ಸಿಂಗ್ ನಾಮಕರಣ ಮಾಡಿರುವುದು ಕೊಡಗಿನ ಯೋಧರಿಗೆ ಹೆಮ್ಮೆ ತರುವ ವಿಚಾರವಾಗಿದೆ.
ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರು 1949ರಿಂದ 1952ರ ತನಕ ರಕ್ಷಣಾ ಪಡೆಯ ಮಹಾದಂಡನಾಯಕರಾಗಿ ಕರ್ತವ್ಯ ನಿರ್ವಹಿಸಿದ್ದರು. ಇನ್ನು ದೇಶದ ರಕ್ಷಣಾ ಪಡೆಯ ಮೂರು ವಿಭಾಗದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಿದ್ದು ಇವರೊಬ್ಬರೇ. ಅದು ಸೇನಾ ಇತಿಹಾಸವೂ ಹೌದು. ಇವರ ಸೇವೆಯನ್ನು ಪರಿಗಣಿಸಿ 1986ರಲ್ಲಿ ಅವರಿಗೆ ಅತ್ಯುನ್ನತ ಗೌರವವಾದ ಫೀಲ್ಡ್ ಮಾರ್ಷಲ್ ಅನ್ನು ಸರ್ಕಾರ ನೀಡಿ ಗೌರವಿಸಿತ್ತು.
ಇಂಥ ಮಹಾನ್ ವ್ಯಕ್ತಿಯ ಹೆಸರನ್ನು ದೆಹಲಿಯಲ್ಲಿರುವ ಪೆರೇಡ್ ಮೈದಾನಕ್ಕೆ ಇಟ್ಟಿರುವುದು ಯೋಧರು ಮಾತ್ರವಲ್ಲ ಇಡೀ ಕೊಡಗಿನವರು ಖುಷಿ ಪಡಬೇಕಾದ ವಿಚಾರವಾಗಿದೆ. ಭಾರತೀಯ ರಕ್ಷಣಾ ಕ್ಷೇತ್ರದ ಇತಿಹಾಸದಲ್ಲಿ ನಕ್ಷತ್ರದಂತೆ ಫೀಲ್ಡ್ಮಾರ್ಷಲ್ ಕಾರ್ಯಪ್ಪ ಅವರ ಹೆಸರು ಹೊಳೆಯುತ್ತಿರುತ್ತದೆ. ಈ ಹಿಂದೆ ಕೊಡಗಿಗೆ ಆಗಮಿಸಿದ್ದ ಭೂ ಸೇನೆಯ ಮುಖ್ಯಸ್ಥ ಜನರಲ್ ದಲ್ಬೀರ್ ಸಿಂಗ್ ಅವರಿಗೆ ಹಿರಿಯ ಸೇನಾಧಿಕಾರಿಗಳು ಪೆರೇಡ್ ಮೈದಾನಕ್ಕೆ ಕಾರ್ಯಪ್ಪ ಅವರ ಹೆಸರನ್ನಿಡಲು ಮನವಿ ಮಾಡಿದ್ದರು. ಇದನ್ನು ಪುರಷ್ಕರಿಸಿದ ಅವರು ತಮ್ಮ ಸೇವಾ ಅವಧಿಯೊಳಗೆ ಆ ಕಾರ್ಯವನ್ನು ಮಾಡುವ ಮೂಲಕ ಕೊಡಗಿನ ಯೋಧರ ಮಾತಿಗೆ ಮನ್ನಣೆ ನೀಡಿದ್ದಾರೆ. ಇದನ್ನು ಕೊಡಗಿನ ಯೋಧರು ಶ್ಲಾಘಿಸಿದ್ದಾರೆ.