ಮಾಗಡಿ: ಲಾರಿಯೊಂದು ರಸ್ತೆ ಬದಿಯ ಒಳಚರಂಡಿ ಮೇಲೆ ತೆರಳುತ್ತಿದ್ದಾಗ ಚಕ್ರ ಹೂತು ಮಗುಚಿದ ಘಟನೆ ಪಟ್ಟಣದ ಗೌರಮ್ಮನ ಕೆರೆಯಲ್ಲಿ ವೆಂಕಟೇಶ್ವರ ಸ್ವಾಮಿ ದೇವಸ್ಥಾನದ ಬಳಿ ನಡೆದಿದ್ದು, ಅದೃಷ್ಟವಶಾತ್ ಲಾರಿ ಪಕ್ಕದಲ್ಲಿದ್ದ ವಿದ್ಯುತ್ ಟ್ರಾನ್ಸ್ಫಾರ್ಮರ್ಗೆ ತಾಕದೆ ಇದ್ದುದರಿಂದ ಭಾರೀ ಅನಾಹುತ ತಪ್ಪಿದೆ.
ಇಲ್ಲಿ 3 ತಿಂಗಳಿನಿಂದಲೂ ಒಳಚರಂಡಿ ಯುಜಿಡಿ ಕಾಮಗಾರಿ ನಡೆಸಲಾಗುತ್ತಿದೆ. ಕಾಮಗಾರಿಯ ಮೇಲೆ ಮಣ್ಣು ಹಾಕಿದ್ದರಿಂದ ಗೊತ್ತಾಗದೆ ದೇವಸ್ಥಾನಕ್ಕೆ ಬಂದ ಟಿಪ್ಪರ್ ಲಾರಿಯೊಂದರ ಎರಡು ಚಕ್ರಗಳು ಒಳಚರಂಡಿಯಲ್ಲಿ ಹೂತು ಹೋಗಿದ್ದು ಲಾರಿ ಒಂದೆಡೆಗೆ ವಾಲಿ ನಿಂತಿದೆ.
ಒಂದು ವೇಳೆ ಲಾರಿ ಪಲ್ಟಿ ಹೊಡೆದಿದ್ದರೆ ಪಕ್ಕದಲ್ಲೇ ಇದ್ದ ಟ್ರಾನ್ಸ್ಫಾರ್ಮರ್ ಮೇಲೆ ಬೀಳುವ ಸಾಧ್ಯತೆ ಹೆಚ್ಚಾಗಿತ್ತು. ಆದರೆ ಅದೃಷ್ಟವಶಾತ್ ಅದು ಹಾಗೆಯೇ ನಿಂತಿದ್ದರಿಂದ ಭಾರೀ ಅನಾಹುತ ತಪ್ಪಿದೆ.
ಕಳಪೆ ಗುಣಮಟ್ಟದ ಕಾಮಗಾರಿ ಮಾಡಿದ್ದರಿಂದ ಅವಘಡ ಸಂಭವಿಸಿದೆ ಎಂದು ಸಾರ್ವಜನಿಕರು ಆರೋಪಿಸಿದ್ದು, ಮೂರು ತಿಂಗಳಿನಿಂದ ಕಾಮಗಾರಿ ನಡೆಯುತ್ತಿದೆ. 25 ಅಡಿವರೆಗೂ ಗುಂಡಿ ತೆಗೆಯಲಾಗಿದೆ, ಸರಿಯಾಗಿ ಮಣ್ಣು ಮುಚ್ಚದೆ ಬೇಕಾಬಿಟ್ಟಿ ಕೆಲಸ ಮಾಡಲಾಗಿದ್ದು, ಇದರಿಂದ ಅವಘಡಗಳು ಸಂಭವಿಸುತ್ತಿವೆ ಅಷ್ಟೇ ಅಲ್ಲ ಯುಜಿಡಿ ಕಾಮಗಾರಿ ಪೂರ್ಣಗೊಳ್ಳದ ಹಿನ್ನಲೆಯಲ್ಲಿ ಕೆಲವು ವಾರ್ಡ್ ಗಳಲ್ಲಿ ಯುಜಿಡಿ ಚೇಬಂರ್ಗಳು ತುಂಬಿ ಹರಿಯುತ್ತಿವೆ ಎಂದು ದೂರಿದ್ದಾರೆ.