ಮೈಸೂರು: ಸಂಕ್ರಾಂತಿ ಹಬ್ಬದ ಮುನ್ನ ದಿನ ರಾತ್ರಿ ಆಂಜನೇಯನ ಹುಂಡಿಗೆ ಕನ್ನ ಹಾಕಿ ಕಳ್ಳರು ಹಣ ದೋಚಿರುವ ಘಟನೆ ನಗರದ ಹೃದಯಭಾಗವಾದ ತ್ಯಾಗರಾಜನಗರ ರಸ್ತೆಯ ಚಿಕ್ಕ ಆಂಜನೇಯ ದೇಗುಲದಲ್ಲಿ ನಡೆದಿದೆ.
ಚಾಮರಾಜ ಜೋಡಿ ರಸ್ತೆಯಿಂದ ತ್ಯಾಗರಾಜ ರಸ್ತೆಗೆ ಸಾಗುವ ಹಾದಿಯಲ್ಲಿರುವ ಆಂಜನೇಯ ದೇಗುಲಕ್ಕೆ ಸಾವಿರಾರು ಮಂದಿ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸುತ್ತಾರೆ. ಹೀಗೆ ಬರುವ ಭಕ್ತರು ತಮ್ಮ ಕೈಲಾದ ಹಣವನ್ನು ಹುಂಡಿಗೆ ಹಾಕಿ ಹೋಗುತ್ತಾರೆ. ಮಕ್ಕಳು, ದೊಡ್ಡವರು ಸೇರಿದಂತೆ ಎಲ್ಲರೂ ಇಲ್ಲಿ ತಾಯತ ಕಟ್ಟಿಸಿಕೊಳ್ಳುತ್ತಾರೆ.
ಈ ದೇವಾಲಯದ ಆದಿದೇವರಾದ ಆಂಜನೇಯನ ಮೇಲೆ ಎಲ್ಲರಿಗೂ ಭಕ್ತಿ ನಂಬಿಕೆಯಿದೆ. ಪುಟ್ಟ ದೇವಾಲಯವಾಗಿದ್ದು ರಸ್ತೆ ಬದಿಯಲ್ಲಿರುವುದರಿಂದ ಸಾಮಾನ್ಯವಾಗಿ ಪ್ರಾರ್ಥಿಸಿ ಮುನ್ನಡೆಯುತ್ತಾರೆ. ಇಂತಹ ದೇವಾಲಯಕ್ಕೆ ಕಳ್ಳರು ಕನ್ನ ಹಾಕಿರುವುದು ಅಚ್ಚರಿ ತಂದಿದೆ. ಶುಕ್ರವಾರ ರಾತ್ರಿ ನುಗ್ಗಿದ ಕಳ್ಳರು ಹುಂಡಿಯನ್ನು ಹೊತ್ತೊಯ್ದಿದ್ದಾರೆ. ಇದರಲ್ಲಿ ಎಷ್ಟು ಹಣವಿತ್ತು ಎಂಬುದು ಮಾತ್ರ ತಿಳಿದು ಬಂದಿಲ್ಲ. ಸಾವಿರಾರು ರೂಪಾಯಿ ಇದ್ದಿರಬಹುದು.
ಸ್ಥಳಕ್ಕೆ ಬೆರಳಚ್ಚು ತಜ್ಞರು ಸೇರಿದಂತೆ ಪೊಲೀಸರು ಆಗಮಿಸಿ ಮಹಜರು ನಡೆಸಿದ್ದಾರೆ. ಬಹಳಷ್ಟು ದಿನಗಳಿಂದ ಹೊಂಚು ಹಾಕಿ ಈ ಕೃತ್ಯ ಎಸಗಿರಬಹುದೆಂದು ಶಂಕಿಸಲಾಗಿದೆ. ಈ ರಸ್ತೆಯಲ್ಲಿ ಸಿಸಿಟಿವಿಗಳಿದ್ದರೆ ಅವುಗಳನ್ನು ವೀಕ್ಷಿಸಿ ಪೊಲೀಸರು ಕಳ್ಳರನ್ನು ಪತ್ತೆ ಹಚ್ಚುವ ಸಾಧ್ಯತೆಯಿದೆ. ಇದೇ ಕಳ್ಳರು ಇನ್ನೆಷ್ಟು ಕಡೆಗಳಲ್ಲಿ ದೇವರ ಹುಂಡಿ ಕದ್ದೊಯ್ದಿದ್ದಾರೋ ಗೊತ್ತಿಲ್ಲ.
ಕೆ.ಆರ್.ಪೊಲೀಸ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.