ಮಡಿಕೇರಿ: ಕೊಡಗಿನ ಮೂಲ ಆಚಾರ ವಿಚಾರ, ಸಂಸ್ಕೃತಿಯ ಬಗ್ಗೆ ಮಕ್ಕಳಲ್ಲಿ ಆಸಕ್ತಿ ಮೂಡಿಸಲು ತರಬೇತಿಯ ಅಗತ್ಯವಿದ್ದು, ವೇದಿಕೆಯನ್ನು ಕಲ್ಪಿಸಿಕೊಡಲು ಎಲ್ಲರೂ ಪ್ರಯತ್ನಿಸಬೇಕೆಂದು ವಿಧಾನ ಪರಿಷತ್ ಸದಸ್ಯರಾದ ವೀಣಾಅಚ್ಚಯ್ಯ ಕರೆ ನೀಡಿದ್ದಾರೆ.
ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಹಾಗೂ ಕೊಡವ ಮಕ್ಕಡ ಕೂಟದ ಸಂಯುಕ್ತ ಆಶ್ರಯದಲ್ಲಿ ನಗರದ ಜನರಲ್ ತಿಮ್ಮಯ್ಯ ಸ್ಕೂಲ್ ನಲ್ಲಿ ನಡೆದ ಮೂರನೇ ವರ್ಷದ ಮಕ್ಕಳ ಕೊಡವ ಜನಪದ ಸಾಂಸ್ಕೃತಿಕ ನಮ್ಮೆಯ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಮಕ್ಕಳ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಕೊಡಗಿನ ಸಂಸ್ಕೃತಿಯನ್ನು ಉಳಿಸಲು ಸಾಧ್ಯ. ಈ ನಿಟ್ಟಿನಲ್ಲಿ ಕೊಡವ ಸಾಹಿತ್ಯ ಅಕಾಡೆಮಿ ಹಾಗೂ ವಿವಿಧ ಸಂಘ ಸಂಸ್ಥೆಗಳ ಪ್ರಯತ್ನ ಶ್ಲಾಘನೀಯವೆಂದರು.
ಬೆಂಗಳೂರಿನ ಬಸವ ಸಮಿತಿಯ ಅಧ್ಯಕ್ಷರಾದ ಅರವಿಂದ ಜತ್ತಿ ಮಾತನಾಡಿ ಮಕ್ಕಳಲ್ಲಿ ಸಾಹಿತ್ಯ ಹಾಗೂ ಸಂಸ್ಕೃತಿಯ ಬಗ್ಗೆ ಆಸಕ್ತಿ ಹೆಚ್ಚಿಸಿದಾಗ ಮಾತ್ರ ಮೂಲ ಸೊಗಡು ಉಳಿಯಲು ಸಾಧ್ಯವೆಂದು ಅಭಿಪ್ರಾಯಪಟ್ಟರು.
ಡಾ.ಎಂ.ಪಿ.ರೇಖಾ ಸಂಪಾದಕತ್ವದ ಬೆಂಗಳೂರಿನ ಬಸವ ಸಮಿತಿ ಪ್ರಕಟಿತ ವಚನ ಕೊಡವಾನುವಾದ ಪುಸ್ತಕ ಹಾಗೂ ಮೊಣ್ಣಂಡ ಶೋಭಾ ಸುಬ್ಬಯ್ಯ ಸಾಹಿತ್ಯ ರಚನೆಯ ಕೊಡವ ಕೀರ್ತನ ಮಾಲೆ ಶಾಸ್ತ್ರೀಯ ಪಾಟ್ ಸಿಡಿಯನ್ನು ವೀಣಾ ಅಚ್ಚಯ್ಯನವರು, ಬಸವ ಸಮಿತಿಯ ಅಧ್ಯಕ್ಷ ಅರವಿಂದ ಜತ್ತಿಯವರು ತೆಳ್ಂಗ್ನ ಕಾವೇರಿ ನಾಟಕ ಕೃತಿ ಹಾಗೂ ಐತಿಚಂಡ ರಮೇಶ್ ಉತ್ತಪ್ಪನವರ ಕುಡಿಕಾರ ನಾಟಕ ಕೃತಿಯನ್ನು ಹಾಗೂ ನಂಗಕೊಡವ ಭಾಗ-2 ಸಿಡಿಯನ್ನು ಮಡಿಕೇರಿ ಜನರಲ್ ತಿಮ್ಮಯ್ಯ ಪಬ್ಲಿಕ್ ಸ್ಕೂಲ್ ನ ಕಾರ್ಯಾಧ್ಯಕ್ಷರಾದ ಮಣವಟ್ಟಿರ ಈ.ಚಿಣ್ಣಪ್ಪನವರು ಬಿಡುಗಡೆಗೊಳಿಸಿದರು. ವಚನ ಅನುವಾದ ಪಡಿಸಿದವರಾದ ತೀತರ ರೇಖಾ ವಸಂತ್ ನಾಗೇಶ್ ಕಾಲೂರ್, ಮುಲ್ಲೇಂಗಡ ರೇವತಿ ಪೂವಯ್ಯ, ಬಾಚರಣಿಯಂಡ ಅಪ್ಪಣ್ಣ ಹಾಗೂ ರಾಣು ಅಪ್ಪಣ್ಣನವರನ್ನು ಇದೇ ಸಂದರ್ಭ ಸನ್ಮಾನಿಸಲಾಯಿತು.
ಅಕಾಡೆಮಿಯ ವತಿಯಿಂದ ಮಡಿಕೇರಿಯ ಭಾರತೀಯ ವಿದ್ಯಾಭವನ ಶಾಲೆ, ಮೂರ್ನಾಡ್ ಕೊಡವ ಸಮಾಜ, ಕೊಯವ ಸಮಾಜ, ಕೊಯವ ಸಮಾಜ, ಅಮ್ಮತ್ತಿ ಕೊಡವ ಸಮಾಜ ಹಾಗೂ ಬೆಂಗಳೂರಿನ ಮತ್ತಿ ಕೆರೆ ಕೊಡವ ಸಮಾಜಕ್ಕೆ ಕೊಡವ ಸಂಸ್ಕೃತಿಯ ದುಡಿಯನ್ನು ವಿತರಿಸಲಾಯಿತು.