ಮಡಿಕೇರಿ: ಭಾರತೀಯ ಭೂ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಕೊಡಗಿನವರಾದ ಮೇಜರ್ ಜನರಲ್ ಪಿ.ಸಿ.ತಿಮ್ಮಯ್ಯ ಅವರು ‘ಲೆಫ್ಟಿನೆಂಟ್ ಜನರಲ್’ ಆಗಿ ಬಡ್ತಿ ಹೊಂದಿದ್ದಾರೆ.
ಕೊಡಗಿನ ಪಟ್ಟಚೆರುವಂಡ ಪೊನ್ನಪ್ಪ ಚಂಗಪ್ಪ ಹಾಗೂ ಗೌರು ಚಂಗಪ್ಪರ ಪುತ್ರರಾದ ಪಿ.ಸಿ.ತಿಮ್ಮಯ್ಯ ಅವರು, ಭುವನೇಶ್ವರ ಸೈನಿಕ ಶಾಲೆಯಲ್ಲಿ ಶಿಕ್ಷಣ ಪಡೆದು, ಖಡಕ್ ವಾಸ್ಲಾದ ನ್ಯಾಷನಲ್ ಡಿಫೆನ್ಸ್ ಅಕಾಡೆಮಿ ಹಾಗೂ ಇಂಡಿಯನ್ ಮಿಲಿಟರಿ ಆಕಾಡೆಮಿ ಡೆಹ್ರಾಡೂನ್ನಿಂದ ‘ಖಡ್ಗ ಗೌರವ’ ದೊಂದಿಗೆ ಭಾರತೀಯ ಸೇನೆಯನ್ನು 1981 ರ ಜುಲೈ 31 ರಂದು ಸೇರಿದರು.
ಬಾಂಗ್ಲಾದೇಶದಲ್ಲಿ ಭಾರತೀಯ ಹೈಕಮಿಷನರ್ ಗೆ ರಕ್ಷಣಾ ಸಲಹೆಗಾರರಾಗಿ ಕೆಲಸ ಮಾಡಿದ ತಿಮ್ಮಯ್ಯ, ಪಶ್ಚಿಮ ಕಮಾಂಡ್ ನ ಮುಖ್ಯಸ್ಥ ಹಾಗು ಪೂರ್ವ ಕಮಾಂಡಿನ ಮುಖ್ಯಸ್ಥರ ಪ್ರಶಂಸಾ ಪತ್ರಗಳಿಗೆ ಪಾತ್ರರಾಗಿದ್ದಾರೆ.
ಸೇನಾ ಮುಖ್ಯಸ್ಥರ ಎಡಿಸಿ, ಅಸ್ಸಾಂ ರೈಫಲ್ಸ್ ನ ಮುಖ್ಯಸ್ಥರಾಗಿ, ಭಾರತೀಯ ಭೂಸೇನಾ ಕೇಂದ್ರ ಕಛೇರಿಯಲ್ಲಿ ಸಹಾಯಕ ಮಿಲಿಟರಿ ಕಾರ್ಯದರ್ಶಿಯಾಗಿ, ವಿಶ್ವ ಸಂಸ್ಥೆಯ ಕಾರ್ಯಪಾಲನಾ ಪಡೆಯಲ್ಲಿ ಅಂಗೋಲಾದಲ್ಲಿ ಮಿಲಿಟರಿ ವೀಕ್ಷಕರಾಗಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.
ಇದೀಗ ಲೆಫ್ಟಿನೆಂಟ್ ಜನರಲ್ ಆಗಿ ಸೇನಾ ಮುಖ್ಯಸ್ಥರ ಕಛೇರಿಯಲ್ಲಿರುವ ದೂರು ಮತ್ತು ಸಲಹಾ ಕೇಂದ್ರದ ಹೆಚ್ಚುವರಿ ಮಹಾ ನಿರ್ದೇಶಕರಾಗಿ ನಿಯುಕ್ತಿಗೊಂಡಿದ್ದಾರೆ.
ಪತ್ನಿ ನೀನಾ ಹಾಗೂ ಪುತ್ರರಾದ ಭಾರತೀಯ ನೌಕಾದಳದಲ್ಲಿ ಲೆಫ್ಟಿನೆಂಟ್ ಆಗಿರುವ ಅರ್ಜುನ್ ತಿಮ್ಮಯ್ಯ ಹಾಗೂ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಕ್ಷೇತ್ರದಲ್ಲಿ ಅಧ್ಯಯನ ನಿರತ ಅಕ್ಷಯ್ ತಿಮ್ಮಯ್ಯರನ್ನು ಹೊಂದಿದ್ದಾರೆ.