ಮಡಿಕೇರಿ: ಹೋಂಸ್ಟೇ ಸಂಸ್ಕೃತಿಯಿಂದ ಕೊಡಗಿನ ಆಚಾರ-ವಿಚಾರ ಅವನತಿಯೆಡೆಗೆ ಸಾಗುತ್ತಿದೆ ಎಂದು ಮಾಜಿ ಸಚಿವ ಎಂ.ಸಿ.ನಾಣಯ್ಯ ಬೇಸರ ವ್ಯಕ್ತಪಡಿಸಿದ್ದಾರೆ.
ಮಡಿಕೇರಿಯಲ್ಲಿ ನಡೆದ ಕೊಡವ ಸಿನಿಮಾ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಹೋಂ ಸ್ಟೇ ನಡೆಸುವವರು ತಮ್ಮ ಮನೆಯನ್ನು ಪ್ರವಾಸಿಗರಿಗೆ ಬಿಟ್ಟು ಕೊಟ್ಟು ತಾವು ಕೊಟ್ಟಗೆ ಅಥವಾ ಹೋಟೆಲಲ್ಲಿ ಮಲಗುವ ಸ್ಥಿತಿಯುಂಟಾಗಿದೆ, ಈ ಹಿನ್ನೆಲೆಯಲ್ಲಿ ಕೊಡಗು ಜಿಲ್ಲೆಗೆ ಪ್ರವಾಸೋದ್ಯಮವೇ ಬೇಡ. ಈ ವಿಚಾರವನ್ನು ಹಿಂದಿನಿಂದಲೂ ಎಲ್ಲೆಲ್ಲಿ ಸಭೆ-ಸಮಾರಂಭಗಳು ನಡೆಯುತ್ತವೆಯೋ ಅಲ್ಲಿ ಈ ಕಟು ವಾಸ್ತವತೆಯ ಬಗ್ಗೆ ಮಾತನಾಡುತ್ತಲೇ ಬರುತ್ತಿದ್ದೇನೆ ಎಂದು ಹೇಳಿದರು.
ವೈವಿಧ್ಯತೆಗೆ, ಸಂಸ್ಕೃತಿಗೆ ಹಾಗೂ ವಿಶಿಷ್ಟ ಆಚಾರ-ವಿಚಾರ, ಮಣ್ಣು, ನೀರು, ಪ್ರಕೃತಿ ಸೌಂದರ್ಯಗಳನ್ನು ಮೈಗೂಡಿಸಿಕೊಂಡಿರುವ ಕೊಡಗು ಜಿಲ್ಲೆಯಲ್ಲಿ ವಾರದ ಮೂರು ದಿನಗಳ ಕಾಲ ದೇಶ-ವಿದೇಶಗಳಿಂದ ಹಾಗೂ ಹೊರ ರಾಜ್ಯಗಳಿಂದ ಬಂದವರಿಂದ ತುಂಬಿರುತ್ತದೆ ಎಂದು ಖೇದ ವ್ಯಕ್ತಪಡಿಸಿದ ಅವರು ಈ ಪರಿಸ್ಥಿತಿಗೆ ನಾವೇ ನೇರ ಕಾರಣರಾಗಿದ್ದೇವೆ ಎಂದರು.
ಸೈನ್ಯದಿಂದ ನಿವೃತ್ತಿಯಾಗಿ ಬರುವ ಯೋಧರ ಬಗ್ಗೆ ಮಾತನಾಡಿದ ಅವರು ಯೋಧ ಮನಸ್ಥಿತಿ, ಚಿಂತನೆ, ಗೊಂದಲಗಳಿಗೊಳಗಾಗಿ ಕೊನೆಗೆ ವಿಧಿಯಿಲ್ಲದೆ ಖಾಸಗಿ ಕಂಪೆನಿಗಳಲ್ಲಿ, ಬ್ಯಾಂಕ್ಗಳಲ್ಲಿ ಸೆಕ್ಯೂರಿಟಿಯಾಗಿ ಸೇರ್ಪಡೆಗೊಳ್ಳುತ್ತಿದ್ದಾರೆ. ಕೊಡಗು ಹಿಂದೆ ಹೇಗಿತ್ತು, ಈಗ ಏನಾಗಿದೆ ಎಂಬುದರ ಬಗ್ಗೆ ಚಿಂತಿಸಿದಾಗ ಇದ್ದ ಗದ್ದೆ, ತೋಟವನ್ನು ಮಾರಾಟ ಮಾಡಿದ್ದಾರೆ, ಕೆಲವರು ಹೋಂ ಸ್ಟೇ ನಿರ್ಮಿಸಿ ಇದ್ದ ಸಂಸ್ಕೃತಿಯ ನಾಶಕ್ಕೆ ಕಾರಣರಾಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.