ಮಂಡ್ಯ: ಎಲ್ಲರೂ ಸಂಕ್ರಾಂತಿ ಹಬ್ಬದ ಸಡಗರದಲ್ಲಿರುವಾಗಲೇ ಸಾಲ ಮಾಡಿಕೊಂಡಿದ್ದ ರೈತನೊಬ್ಬ ಅದನ್ನು ತೀರಿಸುವ ಮಾರ್ಗ ಕಾಣದೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮದ್ದೂರಿನ ಕುದರಗುಂಡಿ ಗ್ರಾಮದಲ್ಲಿ ನಡೆದಿದೆ.
ಮದ್ದೂರು ತಾಲೂಕಿನ ಕುದರಗುಂಡಿ ಗ್ರಾಮದ ಬೋರೇಗೌಡ (60) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಈತ ಒಂದೂವರೆ ಎಕರೆ ಜಮೀನು ಹೊಂದಿದ್ದು, ಕೃಷಿ ಮಾಡಲೆಂದು ಬೆಳೆ ಸಾಲವಾಗಿ ಗೆಜ್ಜಲಗೆರೆ ಕೃಷಿ ಪತ್ತಿನ ಸಹಕಾರ ಸಂಘದಿಂದ 75 ಸಾವಿರ, ಖಾಸಗಿ ಲೇವದೇವಿರದಾರರಿಂದ 2.25 ಲಕ್ಷ ಸಾಲ ಪಡೆದಿದ್ದರು ಎನ್ನಲಾಗಿದೆ.
ಈ ಬಾರಿ ಮಳೆ ಬಾರದ ಹಿನ್ನಲೆಯಲ್ಲಿ ನಾಲೆಗೆ ನೀರು ಹಾಯಿಸಿರಲಿಲ್ಲ. ನೀರನ್ನು ನಂಬಿ ಕೃಷಿ ಮಾಡುವ ಖುಷಿಯಲ್ಲಿದ್ದ ರೈತ ಬೋರೇಗೌಡರಿಗೆ ಇದರಿಂದ ನಿರಾಶೆಯಾಗಿತ್ತಲ್ಲದೆ, ಬೆಳೆ ಬೆಳೆಯಲು ಸಾಧ್ಯವಾಗದ ಕಾರಣ ಮಾಡಿದ ಸಾಲವನ್ನು ತೀರಿಸಲು ಅಸಾಧ್ಯವಾಗಿತ್ತು.
ಸಾಲ ನೀಡಿದರು ಕೂಡಲೇ ನೀಡುವಂತೆ ಒತ್ತಾಯ ಮಾಡಿದ್ದರು. ಇದರಿಂದ ಬೇಸತ್ತಿದ್ದ ರೈತ ಬೇರೆ ದಾರಿ ಕಾಣದೆ ಮನನೊಂದು ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಂಬಂಧ ಮದ್ದೂರು ಪಟ್ಟಣ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮಕೈಗೊಂಡಿದ್ದಾರೆ.