ಗೋಣಿಕೊಪ್ಪಲು: ಕಾಡಾನೆ ಹಾವಳಿ, ಕುಡಿಯುವ ನೀರಿನ ಸಮಸ್ಯೆ, ಅರಣ್ಯ ಇಲಾಖೆ ಕಿರುಕುಳ, ಸಿಗದ ಹಕ್ಕು ಪತ್ರ ಮೊದಲಾದ ಸಮಸ್ಯೆಗಳನ್ನು ತಿತಿಮತಿ ಸಮೀಪದ ವಿವಿಧ ಹಾಡಿಗಳ ಗಿರಿಜನರು ಮಾಜಿ ಉಪ ಮುಖ್ಯ ಮಂತ್ರಿ ಆರ್.ಅಶೋಕ್ ಅವರ ಮುಂದೆ ಸೋಮವಾರ ತೋಡಿಕೊಂಡರು.
ತಿತಿಮತಿ ಸಮೀಪದ ಆಯಿರಸುಳಿ, ಜಂಗಲ್ಹಾಡಿ, ಚೇಣಿ ಹಡ್ಲು ಹಾಡಿಗಳಿಗೆ ಬರ ಅಧ್ಯಯನ ಕೈಗೊಂಡ ಆರ್. ಆಶೋಕ್ ಅವರ ಮುಂದೆ ಗಿರಿಜನ ಹಾಡಿಯ ಮುಖಂಡ ಸುಬ್ರು ಮಾತನಾಡಿ ಈ ಬಾರಿ ಮಳೆ ಕಡಿಮೆಯಾದ್ದರಿಂದ ಹಾಡಿಗಳಲ್ಲಿ ಕುಡಿಯಲು ನೀರಿಲ್ಲದಂತಾಗಿದೆ. ಗದ್ದೆಯಲ್ಲಿ ಬೆಳೆದಿದ್ದ ಬೆಳೆಗಳು ಒಣಗಿ ಹೋಗಿವೆ. ಕಾಡಾನೆಗಳ ಕಾಟದಿಂದ ಬೆಳೆ, ಕಾಫಿ ನಷ್ಟವಾಗಿದೆ. ರಾತ್ರಿಯಾದ ಕೂಡಲೆ ಕಾಡಾನೆಗಳು ನೇರವಾಗಿ ಗುಡಿಸಿಲಿನ ಮೇಲೆ ದಾಳಿ ಮಾಡಿ ಹಾಡಿ ಜನರಿಗೆ ಜೀವಭಯ ಮೂಡಿಸಿವೆ ಎಂದು ಹೇಳಿದರು.
ನೂರಾರು ವರ್ಷಗಳಿಂದ ಹಾಡಿಯಲ್ಲಿ ನೆಲಸಿದ್ದರೂ ಜಾಗದ ಹಕ್ಕು ಪತ್ರ ಲಭಿಸಿಲ್ಲ. ಅರಣ್ಯ ಇಲಾಖೆಯವರು ಹೊರಗಿನಿಂದ ಯಾವುದೇ ವಸ್ತುಗಳನ್ನು ತರಲು ಬಿಡುತ್ತಿಲ್ಲ. ಜತೆಗೆ ಎತ್ತಂಗಡಿ ಮಾಡಿಸಲು ನಿರಂತರವಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ತಮ್ಮ ಅಳಲು ತೋಡಿಕೊಂಡರು.
ನೆಮ್ಮದಿಯಾಗಿ ನೆಲೆಸಲು ವಾಸ ಸ್ಥಳದ ಹಕ್ಕು ಪತ್ರ ಕೊಡೆಸಿಕೊಡಿ. ಕುಡಿಯುವ ನೀರಿಗೆ ಬಾವಿ ತೋಡಿಸಿಕೊಡಿ. ಕಾಡಾನೆ ಹಾವಳಿಯನ್ನು ತಡೆಗಟ್ಟಿ ಆತಂಕವನ್ನು ದೂರಮಾಡಿಸಿ. ಅರಣ್ಯ ಇಲಾಖೆಯವರು ಕಿರುಕುಳವನ್ನು ತಡೆಗಟ್ಟಿಸಿ ಎಂದು ಮನವಿ ಮಾಡಿಕೊಂಡರು.
ಇದನ್ನೆಲ್ಲ ಕೇಳಿಸಿಕೊಂಡ ಅಶೋಕ್ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ಜತೆ ಮಾತನಾಡಿ ಸಮಸ್ಯೆ ಪರಿಹಾರಕ್ಕೆ ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು ಎಂದು ಹೇಳಿದರು.
ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ತೇಜಶ್ವಿನಿ ಗೌಡ, ಉಪಾಧ್ಯಕ್ಷ ಬಿ.ಸೋಮಶೇಖರ್, ಮಾಜಿ ಸಂಸದ ಮಾಜಿ ಸಚಿವ ಅಶ್ವತ್ಥ್ ನಾರಾಯಣ, ನಾಗೇಂದ್ರ, ವಿಧಾನ ಪರಿಷತ್ ಸದಸ್ಯ ಪುಟ್ಟಸ್ವಾಮಿ, ಶಾಸಕ.ಕೆ.ಜಿ.ಬೋಪಯ್ಯ, ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಮನು ಮುತ್ತಪ್ಪ, ತಾಲ್ಲೂಕು ಅಧ್ಯಕ್ಷ ಅರುಣ್ ಭೀಮಯ್ಯ, ಮಹಿಳಾ ಘಟಕದ ಅಧ್ಯಕ್ಷೆ ಯಮುನಾ ಚಂಗಪ್ಪ, ಜಿಲ್ಲಾ ಪಂಚಾಯಿತಿ ಸದಸ್ಯ ಸಿ.ಕೆ.ಬೋಪಣ್ಣ, ಮಾಜಿ ಸದಸ್ಯೆ ಕಾಂತಿ ಸತೀಶ್, ರಂಜನ್ ವಂಗಪ್ಪ, ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಚಲನ್ ಕುಮಾರ್, ತಿತಿಮತಿ ಬಿಜೆಪಿ ಸ್ಥಾನೀಯ ಸಮಿತಿ ಅಧ್ಯಕ್ಷ ಎನ್.ಎನ್.ಅನೂಫ್, ಗ್ರಾಮ ಪಂಚಾಯಿತಿ ಸದಸ್ಯರಾದ ಸಿದ್ದರಾಜು, ವಿಜಯಾ, ಪೊನ್ನು, ಮುಖಂಡರಾದ ಕಿಲನ್ ಗಣಪತಿ, ಚೆಪ್ಪುಡೀರ ಮಾಚು, ದಾದು ಪೂವಯ್ಯ, ಮಧು ದೇವಯ್ಯ, ರಾಜೇಶ್, ರಾಣಿ ನಾರಾಯಣ, ರತಿ ಅಚ್ಚಪ್ಪ, ಜೆಶ್, ಸುಜಾ ಪೂಣಚ್ಚ, ಆರ್.ಎಂ.ಸಿ.ಸದಸ್ಯ ಮೋಹನ್ ರಾಜ್ ಮುಂತಾದವರು ಹಾಜರಿದ್ದರು.