ಚಾಮರಾಜನಗರ: ಸಚಿವ ಹೆಚ್.ಎಸ್.ಮಹದೇವ ಪ್ರಸಾದ್ ಅವರ ಅಕಾಲಿಕ ಮರಣದ ನಂತರ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರಕ್ಕೆ ಲಗ್ಗೆಯಿಡಲು ಕೆಲವು ಮುಖಂಡರು ಮುಂದಾಗಿದ್ದಾರೆ. ಮತ್ತೆ ಕೆಲವರು ರಾಜಕೀಯಕ್ಕೆ ಸೇರ್ಪಡೆಗೊಂಡು ನಾಯಕರಾಗಿ ಬೆಳೆಯುವ ಕನಸು ಕಾಣುತ್ತಿದ್ದಾರೆ. ಅವರ ಪೈಕಿ ಮಾಜಿ ಸ್ಪೀಕರ್ ದಿವಂಗತ ಕೆ.ಎಸ್.ನಾಗರತ್ನಮ್ಮ ಅವರ ಶಿಷ್ಯ ವಿಧಾನ ಮಂಡಲದ ನಿವೃತ್ತ ಅಧೀನ ಕಾರ್ಯದರ್ಶಿ ಕಬ್ಬಳ್ಳಿ ಎಂ. ಶಾಂತಪ್ಪ ಅವರು ಒಬ್ಬರಾಗಿದ್ದಾರೆ.
ವಿಧಾನಮಂಡಲದಲ್ಲಿದ್ದುಕೊಂಡು ರಾಜಕೀಯ, ರಾಜಕಾರಣಿಗಳನ್ನು ಹತ್ತಿರದಿಂದ ನೋಡಿ ಅರಿತಿರುವ ಇವರು ಇದೀಗ ಗುಂಡ್ಲುಪೇಟೆ ಕ್ಷೇತ್ರದಿಂದ ರಾಜಕೀಯ ಅಖಾಡಕ್ಕೆ ಧುಮುಕಲು ಸಿದ್ಧತೆ ನಡೆಸುತ್ತಿದ್ದಾರೆ. ಇದುವರೆಗೆ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರ ಮಹದೇವಪ್ರಸಾದ್ ಅವರ ಹಿಡಿತದಲ್ಲಿತ್ತು. ಅವರ ಎದುರು ನಿಂತು ಜಯಿಸುವುದು ಕಷ್ಟಸಾಧ್ಯವಾಗಿತ್ತು. ಹೀಗಾಗಿಯೇ ಬಹಳಷ್ಟು ಮಂದಿ ತಮ್ಮ ರಾಜಕೀಯ ಕನಸನ್ನು ಬದಿಗೊತ್ತಿ ತೆಪ್ಪಗಿದ್ದರು. ಆದರೆ ಇದೀಗ ಮಹದೇವಪ್ರಸಾದ್ ಅವರು ನಿಧನರಾಗುತ್ತಿದ್ದಂತೆಯೇ ಕ್ಷೇತ್ರದಲ್ಲಿ ರಾಜಕೀಯ ಲೆಕ್ಕಾಚಾರಗಳು ನಡೆಯುತ್ತಿದ್ದು, ಇತರೆ ನಾಯಕರುಗಳಿಗೆ ನಾನೇಕೆ ಕಣಕ್ಕಿಳಿದು ಸ್ಪರ್ಧಿಸಬಾರದು ಎಂಬ ಆಲೋಚನೆಗಳು ಬರತೊಡಗಿವೆ. ಹೀಗಾಗಿಯೇ ಅದೃಷ್ಟ ಪರೀಕ್ಷೆಗೆ ಮುಂದಾಗುತ್ತಿದ್ದಾರೆ.
ಕಾಂಗ್ರೆಸ್ ನಲ್ಲಿ ಸದ್ಯದ ಪರಿಸ್ಥಿತಿಯಲ್ಲಿ ಉಪಚುನಾವಣೆಯಲ್ಲಿ ಗೀತಾಮಹದೇವಪ್ರಸಾದ್ ಅವರಿಗೆ ಟಿಕೆಟ್ ನೀಡಲು ತೀರ್ಮಾನವಾಗಿದೆ ಎನ್ನಲಾಗುತ್ತಿದ್ದು, ಅಲ್ಲಿ ಬೇರೆ ನಾಯಕರು ಮೌನಕ್ಕೆ ಶರಣಾಗಿದ್ದಾರೆ. ಜತೆಗೆ ಮುಂದೆ ಕಾಂಗ್ರೆಸ್ ಗೆಲುವು ಪಡೆದೇ ಪಡೆಯುತ್ತದೆ ಎಂಬ ಲೆಕ್ಕಾಚಾರಕ್ಕೆ ಬಂದಿದ್ದಾರೆ. ಕಾರಣ ಈಗಾಗಲೇ ನಡೆದ ಎಪಿಎಂಸಿ ಚುನಾವಣೆಯಲ್ಲಿ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಜಯಭೇರಿ ಸಾಧಿಸಿದೆ. ಇನ್ನು ಕಬ್ಬಳ್ಳಿ ಶಾಂತಪ್ಪ ಅವರ ಲೆಕ್ಕಾಚಾರವೇ ಬೇರೆಯಾಗಿದೆ. ಇವರು ದಿವಂಗತ ನಾಗರತ್ನಮ್ಮ ಅವರ ಗರಡಿಯಲ್ಲಿ ಬೆಳೆದವರು ಅವರೇ ಓದಿಸಿ ವಿದ್ಯಾವಂತರನ್ನಾಗಿ ಮಾಡಿ ಉತ್ತಮ ಕೆಲಸನ್ನು ಕೂಡ ಕೊಡಿಸಿದವರು. ಅದರ ಪರಿಣಾಮವಾಗಿ ಅಧಿಕಾರಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಇದೀಗ ಅವರ ಹೆಸರನ್ನು ಮುಂದಿಟ್ಟುಕೊಂಡು ರಾಜಕೀಯಕ್ಕೆ ಬರಲು ವೇದಿಕೆ ಸಿದ್ಧಪಡಿಸಿಕೊಳ್ಳುತ್ತಿದ್ದಾರೆ.
ಶಾಂತಮ್ಮ ಅವರು ಕ್ಷೇತ್ರಕ್ಕೆ ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ಮುಂದಿಟ್ಟುಕೊಂಡು ಜನರ ಮುಂದೆ ಹೋಗುವುದು ಅವರ ಉದ್ದೇಶವಾಗಿದೆ. ಅವರು ಇನ್ನು ನಿಖರವಾಗಿ ಯಾವ ಪಕ್ಷದತ್ತ ಒಲವು ತೋರಿದ್ದಾರೆ ಎಂಬುದು ಗೊತ್ತಾಗಿಲ್ಲ. ಕಾಂಗ್ರೆಸ್ ಪಕ್ಷವನ್ನು ವಿರೋಧಿಸುವುದನ್ನು ನೋಡಿದರೆ ಅದನ್ನು ಹೊರತುಪಡಿಸಿ ಬೇರೆ ಪಕ್ಷದಲ್ಲಿ ಅವಕಾಶಕ್ಕಾಗಿ ಕಾಯುತ್ತಿರುವ ಎಲ್ಲ ಲಕ್ಷಣಗಳು ಕಂಡು ಬರುತ್ತಿವೆ. ಮುಂದಿನ ದಿನಗಳಲ್ಲಿ ಇನ್ನೆಷ್ಟು ನಾಯಕರು ಈ ಕ್ಷೇತ್ರದಲ್ಲಿ ಹುಟ್ಟಿಕೊಳ್ಳುತ್ತಾರೋ ಎಂಬುದನ್ನು ಕಾದು ನೋಡಬೇಕಿದೆ.