ಮೂಡಿಗೆರೆ: ಪಟ್ಟಣದ ಸಂತೆ ಮೈದಾನದಲ್ಲಿ ಹರಡಿಕೊಂಡಿರುವ ಕಸದ ರಾಶಿಯಿಂದಾಗಿ ಅಲ್ಲಿನ ಸ್ಥಳೀಯ ನಿವಾಸಿಗಳು ಹಾಗೂ ಸಂತೆ ಮೈದಾನದಲ್ಲಿರುವ 2 ಕಾಲೇಜುಗಳ ವಿದ್ಯಾರ್ಥಿಗಳು ಸಾಂಕ್ರಾಮಿಕ ರೋಗದ ಭೀತಿಯಿಂದ ದಿನಗಳೆಯುತ್ತಿದ್ದಾರೆ. ಸುಮಾರು 5 ಎಕರೆ ಪ್ರದೇಶದ ದೊಡ್ಡ ಪ್ರಮಾಣದ ಸಂತೆ ಪ್ರತಿ ಶುಕ್ರವಾರ ನಡೆಯುತ್ತಿದೆ.
ಸಂತೆ ದಿನ ಸಂಜೆ ಉಳಿದ ಹಸೀ ಮೀನು, ಕೊಳೆ ತ್ಯಾಜ್ಯ ಸಹಿತ ತರಕಾರಿ, ಪ್ಲಾಸ್ಟಿಕ್ ಸೇರಿದಂತೆ ಕಸವನ್ನು ಎಸೆದು ಸಂತೆ ವ್ಯಾಪಾರಿಗಳು ತೆರಳುತ್ತಿದ್ದಾರೆ. ಇದರಿಂದ ಸಂತೆ ಮೈದಾನ ಸಂಪೂರ್ಣ ಮಲೀನ ತ್ಯಾಜ್ಯಗಳಿಂದ ಗಬ್ಬು ವಾಸನೆ ಬೀರುತ್ತಿದೆ. ಇದರ ಪಕ್ಕದಲ್ಲಿರುವ ಕಾಲೇಜುಗಳಿಗೆ ವಿದ್ಯಾರ್ಥಿಗಳು ತೆರಳುವಾಗ ಮೂಗು ಮುಚ್ಚಿಕೊಂಡು ಹೋಗುವಂತಾ ದುಸ್ಥಿತಿ ಬಂದೊದಗಿದೆ.
ಹತ್ತಿರದ ಮನೆಗಳವರ ಸ್ಥಿತಿ ಇನ್ನಷ್ಟು ದಯನೀಯವಾಗಿದೆ. ಪ್ರತಿ ನಿತ್ಯ ಪ.ಪಂ ಅಧ್ಯಕ್ಷೆ ರಮೀಜಾಬಿ ಮತ್ತು ಆಕೆಯ ಪತಿ ಇಮ್ತಿಯಾಜ್ ಬೆಳಿಗ್ಗೆ 5ರಿಂದ ಕಸದ ರಾಶಿ ತೆರವಿಗೆ ವಿವಿಧ ಬಡಾವಣೆಗಳಿಗೆ ತೆರಳಿ ಪೌರ ಕಾರ್ಮಿಕರೊಂದಿಗೆ ಸೇರಿ ಸ್ವಚ್ಚತೆಗಾಗಿ ತೊಡಗುತ್ತಾರೆ. ಪ್ರಧಾನಿ ನರೇಂದ್ರ ಮೋದಿಯವರ ಸ್ವಚ್ಚ ಭಾರತ್ ಆಂದೋಲನ್ ಕೂಡ ಇಲ್ಲಿ ಶ್ರಮಿಸುತ್ತಿದೆ. ಆದರೆ ಅಧಿಕಾರಿಗಳು ಮಾತ್ರ ಪಟ್ಟಣದ ಸಂತೆ ಮೈದಾನದ ಸ್ವಚ್ಚತೆಗೆ ಪ್ರಯತ್ನ ನಡೆಸದಿರುವುದು ರೋಗ, ರುಜೀನ ಹರಡುವ ಭೀತಿಯನ್ನು ಸ್ಥಳೀಯರಲ್ಲಿ ಮೂಡಿಸಿದೆ.