ಮಡಿಕೇರಿ: ದಿಡ್ಡಳ್ಳಿಯಲ್ಲಿ ನಿವೇಶನಕ್ಕಾಗಿ ಹೋರಾಟ ನಡೆಸುತ್ತಿರುವ ಆದಿವಾಸಿಗಳ ಮೇಲೆ ಪೊಲೀಸರು ನಿಗಾ ವಹಿಸಿದ್ದಾರೆ. ಇಲ್ಲಿನ ಆದಿವಾಸಿಗಳನ್ನು ಎತ್ತಿಕಟ್ಟಿ ಜಿಲ್ಲಾಡಳಿತ, ಸರ್ಕಾರ ಮತ್ತು ಜನಪ್ರತಿನಿಧಿಗಳ ವಿರುದ್ಧ ಎತ್ತಿಕಟ್ಟಿ ತಮ್ಮ ಬೇಳೆ ಬೇಯಿಸಿಕೊಳ್ಳುವಲ್ಲಿ ನಕ್ಸಲ್ ಚಟುವಟಿಕೆಯಲ್ಲಿ ತೊಡಗಿರುವ ವ್ಯಕ್ತಿಗಳು ಶಾಮೀಲಾಗಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿದ್ದು ಈ ಹಿನ್ನಲೆಯಲ್ಲಿ ಪೊಲೀಸರು ದಿಡ್ಡಳ್ಳಿಯತ್ತ ಹದ್ದಿನ ಕಣ್ಣಿಟ್ಟಿದ್ದು ಅಲ್ಲಿನ ಚಟುವಟಿಕೆಗಳನ್ನು ಗಮನಿಸುತ್ತಿದ್ದಾರೆ.
ಸೂರು ಕಳೆದುಕೊಂಡು ನಿರಾಶ್ರಿತರಾದವರಿಗೆ ಜಿಲ್ಲೆಯ ಬೇರೆಡೆ ಸೂರು ಕಲ್ಪಿಸಿಕೊಡಲು ಜಿಲ್ಲಾಡಳಿತ ಮುಂದಾದರೂ ಅದೇ ಸ್ಥಳದಲ್ಲೇ ನೀಡಬೇಕೆಂದು ಪಟ್ಟು ಹಿಡಿಯುತ್ತಿರುವುದು ಸಂಶಯಕ್ಕೆಡೆ ಮಾಡಿಕೊಟ್ಟಿದೆ. ಆದಿವಾಸಿಗಳು ಹೋರಾಟ ನಿಲ್ಲಿಸಿದ ಬಳಿಕ ದಿಡ್ಡಳ್ಳಿಗೆ ಯಾರೆಲ್ಲ ಬಂದು ಹೋಗಿದ್ದಾರೆ ಮತ್ತು ಅಪರಿಚಿತರ ಬಗ್ಗೆಯೂ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ. ಈ ಸಂಬಂಧ ದಕ್ಷಿಣ ವಲಯ ಪೊಲೀಸ್ ಮಹಾನಿರ್ದೇಶಕ ವಿಪುಲ್ ಕುಮಾರ್ ಅವರು ಸಿದ್ದಾಪುರ ಪೊಲೀಸ್ ಠಾಣೆಗೆ ಆಗಮಿಸಿ ಠಾಣೆಯ ಕಡತಗಳನ್ನು ಪರಿಶೀಲಿಸಿ, ಬಳಿಕ ದಿಡ್ಡಳ್ಳಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಜೇಂದ್ರ ಪ್ರಸಾದ್ರೊಂದಿಗೆ ತೆರಳಿ ಘಟನೆಯ ಬಗ್ಗೆ ಮಾಹಿತಿಯನ್ನು ಪಡೆದುಕೊಂಡು ತೆರಳಿರುವುದು ಕುತೂಹಲ ಕೆರಳಿಸಿದೆ. ದಿಡ್ಡಳ್ಳಿಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದ್ದು, ಅಹಿತಕರ ಘಟನೆ ನಡೆಯದಂತೆ ನಿಗಾ ವಹಿಸಲಾಗಿದೆ.
ಈ ನಡುವೆ ದಿಡ್ಡಳ್ಳಿ ವ್ಯಾಪ್ತಿಯಲ್ಲಿ ಕೆಲ ಅಪರಿಚಿತರು ಆಗಮಿಸಿದ್ದು, ನಕ್ಸಲ್ ಚಟುವಟಿಕೆ ನಡೆಯುತ್ತಿರುವ ಬಗ್ಗೆ ಈ ಹಿಂದೆಯೇ ದೂರುಗಳು ಬಂದಿವೆ. ಹೀಗಾಗಿ ಪೊಲೀಸ್ ಬಂದೊಬಸ್ತ್ ಕಲ್ಪಿಸಲಾಗಿದೆ. ಅಪರಿಚಿತರ ಬಗ್ಗೆ ನಿಗಾ ವಹಿಸಲು ಕ್ರಮ ಕೈಗೊಳ್ಳಲಾಗಿದೆ ಎಂದಿರುವ ಅವರು ನಕ್ಸಲ್ ಚಟುವಟಿಕೆಗಳ ಬಗ್ಗೆ ನಿಖರವಾದ ಮಾಹಿತಿ ಇಲ್ಲವೆಂದು ಮಾಧ್ಯಮದವರಿಗೆ ವಿಪುಲ್ ಕುಮಾರ್ ಸ್ಪಷ್ಟಪಡಿಸಿದ್ದಾರೆ. ಆದರೂ ಶಾಂತಿ ಕಾಪಾಡುವ ದೃಷ್ಠಿಯಿಂದ ಸ್ಥಳೀಯ ಪೊಲೀಸರನ್ನು ದಿಡ್ಡಳ್ಳಿಯಲ್ಲಿ ನಿಯೋಜಿಸಲಾಗಿದೆ. ಅಹಿತಕರ ಘಟನೆಗಳನ್ನು ತಡೆಗಟ್ಟಲು ಪೊಲೀಸರೊಂದಿಗೆ ಸಾರ್ವಜನಿಕರು ಕೈಜೋಡಿಸಬೇಕೆಂದು ಅವರು ಮನವಿ ಮಾಡಿದ್ದಾರೆ. ಭೇಟಿಯ ಸಂದರ್ಭ ಮಡಿಕೇರಿ ಡಿ.ವೈ.ಎಸ್.ಪಿ ಛಬ್ಬಿ, ವೃತ್ತನಿರೀಕ್ಷಕ ಮೇದಪ್ಪ, ಸಿದ್ದಾಪುರ ಠಾಣಾಧಿಕಾರಿ ಸಂತೋಷ್ ಕಶ್ಯಪ್ ಹಾಜರಿದ್ದರು.
ನಿವೇಶನ ನೀಡಲು ವಿರೋಧ
ದಿಡ್ಡಳ್ಳಿಯಲ್ಲಿ ನಿವೇಶನಕ್ಕಾಗಿ ಹೋರಾಟ ನಡೆಸುತ್ತಿರುವ ಕುಟುಂಬಗಳಿಗೆ ಸೋಮವಾರಪೇಟೆ ತಾಲೂಕಿನ ಎರಡು ಭಾಗದಲ್ಲಿ ನಿವೇಶನ ಕಲ್ಪಿಸಲು ಜಿಲ್ಲಾಡಳಿತ ಮುಂದಾಗಿರುವುದಕ್ಕೆ ಸೋಮವಾರಪೇಟೆ ತಾಪಂ ವಿರೋಧ ವ್ಯಕ್ತಪಡಿಸಿದೆ.. ತಾಲೂಕಿನಲ್ಲಿರುವ ಪೈಸಾರಿ ಜಾಗವನ್ನು ಇಲ್ಲಿನ ನಿವೇಶನ ರಹಿತರಿಗೆ ವಿತರಿಸಲು ಕ್ರಮ ಕೈಗೊಳ್ಳಬೇಕೆಂಬ ನಿರ್ಣಯವನ್ನು ತಾ.ಪಂ. ಸಾಮಾನ್ಯ ಸಭೆಯಲ್ಲಿ ಅಂಗೀಕರಿಸಲಾಗಿದೆ.
ದಿಡ್ಡಳ್ಳಿಯ ಮೂಲ ನಿವಾಸಿಗಳೊಂದಿಗೆ ಬಾಂಗ್ಲಾ, ಅಸ್ಸಾಂ, ಉಡುಪಿ, ಹುಣಸೂರುಗಳಿಂದ ಬಂದು ಸೇರಿಕೊಂಡವರಿಗೆ ಸೋಮವಾರಪೇಟೆ ತಾಲೂಕಿನ ಬಸವನಳ್ಳಿ ಹಾಗೂ ಹೆಬ್ಬಾಲೆ ಸಮೀಪದ ರಾಂಪುರದಲ್ಲಿ ನಿವೇಶನ ಹಂಚಲು ಯಾವದೇ ಕಾರಣಕ್ಕೂ ಅವಕಾಶ ಕಲ್ಪಿಸಬಾರದೆಂದು ತಾ.ಪಂ. ಅಧ್ಯಕ್ಷೆ ಪುಷ್ಪ ರಾಜೇಶ್ರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನಿರ್ಧರಿಸಲಾಗಿದೆ.
ತಾಪಂ ಉಪಾಧ್ಯಕ್ಷ ಎಂ.ಬಿ. ಅಭಿಮನ್ಯುಕುಮಾರ್ ಮಾತನಾಡಿ, ಜಿಲ್ಲೆಯ ದಿಡ್ಡಳ್ಳಿಯಲ್ಲಿ 36 ಕುಟುಂಬಗಳು ಮಾತ್ರ ನಿಜವಾದ ಮೂಲನಿವಾಸಿಗಳಾಗಿದ್ದು, ಹೊರ ಜಿಲ್ಲೆ, ರಾಜ್ಯ, ಬಾಂಗ್ಲಾದಿಂದ ಬಂದಿರುವ ಮಂದಿ ಇಲ್ಲಿನ ಮೂಲ ನಿವಾಸಿಗಳ ಸೋಗಿನಲ್ಲಿ ಪ್ರತಿಭಟನೆ ಮಾಡುತ್ತಿದ್ದಾರೆ. ಬುದ್ದಿಜೀವಿಗಳ ಹೆಸರಿನಲ್ಲಿ ಕೆಲವರು ದಿಡ್ಡಳ್ಳಿಗೆ ಆಗಮಿಸಿ ಗಲಭೆ ಸೃಷ್ಟಿಸಲು ಸಂಚು ರೂಪಿಸುತ್ತಿದ್ದಾರೆ. ಇವರ ಪ್ರತಿಭಟನೆಗೆ ಹೆದರಿದ ಉಸ್ತುವಾರಿ ಸಚಿವರು ಮತ್ತು ಆ ಕ್ಷೇತ್ರದ ಶಾಸಕರು ಸೋಮವಾರಪೇಟೆ ತಾ.ಪಂ. ಕಾರ್ಯನಿರ್ವಹಣಾಧಿಕಾರಿಗಳ ಹೆಸರಿನ ಖಾತೆಯಲ್ಲಿರುವ ತಾಲೂಕಿನ ಹೆಬ್ಬಾಲೆ ಸಮೀಪದ ರಾಂಪುರ ಹಾಗೂ ಬಸವನಹಳ್ಳಿ ಯಲ್ಲಿರುವ ಜಾಗದಲ್ಲಿ ದಿಡ್ಡಳ್ಳಿಯ ನಿರಾಶ್ರಿತರೆನ್ನಲಾದ ಸುಮಾರು 200ಕ್ಕೂ ಅಧಿಕ ಮಂದಿಗೆ ನಿವೇಶನ ನೀಡಲು ತಯಾರಿ ನಡೆಸಿದ್ದಾರೆ.
ಈ ಬಗ್ಗೆ ತಾಲೂಕು ಪಂಚಾಯಿತಿಯನ್ನಾಗಲಿ, ಸ್ಥಳೀಯ ಗ್ರಾಮ ಪಂಚಾಯಿತಿಯವರನ್ನಾಗಲಿ, ಖಾತೆಯನ್ನು ಹೊಂದಿರುವ ತಾಪಂ ಕಾರ್ಯನಿರ್ವಹಣಾಧಿಕಾರಿಗಳ ಗಮನಕ್ಕೆ ತಾರದೆ ಕ್ರಮ ಕೈಗೊಂಡಿರುವದು ಖಂಡನಾರ್ಹ. ನಮ್ಮ ತಾಲೂಕಿನಲ್ಲಿಯೇ ನಿವೇಶನ ಕೋರಿ ಸುಮಾರು 1800ಕ್ಕೂ ಅಧಿಕ ನಿರ್ಗತಿಕರು ಅಜರ್ಿ ಸಲ್ಲಿಸಿದ್ದಾರೆ. ಇವರಿಗೆ ಮೊದಲು ನಿವೇಶನ ಕಲ್ಪಿಸಬೇಕಾಗಿದೆ ಎಂದು ಆಗ್ರಹಿಸಿದ್ದಾರೆ.