ಚಿಕ್ಕಮಗಳೂರು: ಜಿಲ್ಲೆಯಲ್ಲಿ 4.50 ಲಕ್ಷ ಎಕರೆಗಿಂತಲೂ ಹೆಚ್ಚು ಭೂ ಪ್ರದೇಶವು ಕಾನೂನು ಬಾಹಿರವಾಗಿ ಒತ್ತುವರಿ ಮಾಡಲಾಗಿದೆ ಎಂದು ಸುಬ್ರಹ್ಮಣ್ಯಂ ಸ್ವಾಮಿ ವರದಿಯಲ್ಲಿ ನೀಡಲಾಗಿದೆ. ಭೂಮಿ ಒತ್ತುವರಿ ಮಾಡುವುದು ಸೇರಿದಂತೆ ಕಾನೂನು ಬಾಹಿರವಾಗಿ ಸರ್ಕಾರದ ಭೂಮಿಯನ್ನು ಕಬಳಿಸುವುದು ದಂಡನೀಯ ಅಪರಾಧ ಎಂದು ಜಸ್ಟೀಸ್ ಹೆಚ್.ಎನ್. ನಾರಾಯಣ ತಿಳಿಸಿದರು.
ಅವರು ನಗರದ ಪ್ರವಾಸಿ ಮಂದಿರದಲ್ಲಿ ಅಧಿಕಾರಿಗಳ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಸರ್ಕಾರವು ಹಿಂದೂ ಧಾರ್ಮಿಕ ಸಂಸ್ಥೆ, ವಕ್ಫ್, ಧರ್ಮದಾಯಿ ದತ್ತಿಗಳಿಗೆ, ಸ್ಥಳೀಯ ಪ್ರಾಧಿಕಾರಕ್ಕೆ ಸೇರಿದ ಭೂಮಿಯನ್ನು ಕಾನೂನು ಬಾಹಿರವಾಗಿ ಒತ್ತುವರಿ ಮಾಡಿಕೊಂಡಿರುವುದು ಅಪರಾಧವಾಗಿದೆ. ಕೆಲವು ಜನರು ಸಾರ್ವಜನಿಕ ಭೂಮಿಯನ್ನು ಅಕ್ರಮವಾಗಿ ಕಬಳಿಕೆ ಮಾಡಿಕೊಂಡು ನಕಲು ಗೃಹ ನಿರ್ಮಾಣದ ಸಂಸ್ಥೆಗಳನ್ನು ಮಾಡಿಕೊಂಡು ಸಾರ್ವಜನಿಕರಿಗೆ ಮೋಸದಿಂದ ಸೈಟ್ ಗಳನ್ನು ಮಾರಾಟ ಮಾಡುತ್ತಿರುವುದು ಕಂಡು ಬರುತ್ತಿದೆ. ಇವುಗಳ ಕಡಿವಾಣ ಹಾಕಲು ಈ ನಿಯಮ ಅನುಕೂಲವಾಗಲಿದೆ ಎಂದು ಹೇಳಿದರು.
ಸಾರ್ವಜನಿಕರ ಸುವ್ಯವಸ್ಥೆಯ ಅತಿಕೂಲ ಪರಿಣಾಮವನ್ನು ತಡೆಯಲು ಸಾಧ್ಯವಾಗುತ್ತದೆ. ಭೂಕಬಳಿಕೆ ಸಾಬೀತಾದ ಅಪರಾಧಕ್ಕೆ ಒಂದು ವರ್ಷದಿಂದ ಮೂರು ವರ್ಷಗಳ ಜೈಲು ಶಿಕ್ಷೆ ಹಾಗೂ ಇಪ್ಪತ್ತೈದು ಸಾವಿರ ರೂ.ಗಳ ವರೆಗೆ ದಂಡ ವಿಧಿಸಲಾಗುವುದು. ಒತ್ತುವರಿ ಮಾಡಿದ ಜಮೀನನ್ನು ಮಾರಾಟ ಅಥವಾ ಹಂಚಿಕೆ ಮಾಡಿದ್ದರೆ. ಈ ಉದ್ದೇಶದಿಂದ ಅಂತಹದ್ದನ್ನು ಜಾಹಿರಾತು ಪಡಿಸುವುದು ಅಥವಾ ಸ್ವಾದೀನದಲ್ಲಿ ಇಟ್ಟುಕೊಳ್ಳುವುದು ಅಪರಾಧವಾಗಿರುತ್ತದೆ ಎಂದರು.
ಒತ್ತುವರಿಯು ಕಂಪನಿ ವತಿಯಿಂದ ಆಗಿದ್ದರೆ, ಆ ಸಮಯದಲ್ಲಿ ಕಂಪನಿಯಲ್ಲಿದ್ದ ಪ್ರತಿಯೊಬ್ಬ ಸದಸ್ಯರನ್ನು ತಪ್ಪಿಸ್ಥರಾಗುವುದರೊಂದಿಗೆ ವ್ಯವಹರಣೆಗೆ ಗುರಿಯಾಗುತ್ತಾರೆ. ಸರ್ಕಾರವು ಭೂಕಬಳಿಕೆ ಎಂದು ಅಪಾದಿಸಲಾದ ಕೃತ್ಯವನ್ನು ಶೀಘ್ರ ವಿಚಾರಣೆ ನಡೆಸಲು ಉಚ್ಛ ನ್ಯಾಯಾಲಯದ ನ್ಯಾಯಾಧೀಶರನ್ನೊಳಗೊಂಡ ವಿಶೇಷ ನ್ಯಾಯಾಲಯವನ್ನು ರಚಿಸಲಾಗಿದ್ದು, ಈಗಾಗಲೇ ಬೆಂಗಳೂರು ಕಂದಾಯ ಭವನದಲ್ಲಿ ಕಾರ್ಯನಿರ್ವಸುತ್ತಿದೆ ಎಂದು ತಿಳಿಸಿದರು.