ಮಡಿಕೇರಿ: ಹಸುಗೂಸುವಿನ ತಲೆಗೆ ತಂದೆಯೊಬ್ಬ ಮಾರಣಾಂತಿಕವಾಗಿ ಥಳಿಸಿ ಕೊಲೆ ಮಾಡಿದ್ದಲ್ಲದೆ, ತಾನು ಎಸಗಿದ ಅಪರಾಧವನ್ನು ಮರೆಮಾಚಿದ ಆರೋಪಿಗೆ ಕಠಿಣ ಜೀವಾವಧಿ ಶಿಕ್ಷೆ ಮತ್ತು ದಂಡವನ್ನು ವಿಧಿಸಿ 1ನೇ ಅಧಿಕ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ತೀರ್ಪು ನೀಡಿದೆ.
ಮಡಿಕೇರಿ ಸಮೀಪದ ಬಿಳಿಗೇರಿ ಗ್ರಾಮದಲ್ಲಿರುವ ಸೂದನ ನಾಣಯ್ಯ ಎಂಬವರ ಕಾಫಿ ತೋಟದ ಲೈನ್ ಮನೆಯಲ್ಲಿ ವಾಸವಿದ್ದ ಜೇನುಕುರುಬರ ಸುರೇಶ್ ಎಂಬಾತನು 27.2.2015 ರಾತ್ರಿ 8 ಗಂಟೆಗೆ ತನ್ನ 2 ತಿಂಗಳ ಪ್ರಾಯದ ಇನ್ನೂ ಹೆಸರಿಡದ ಮಗುವನ್ನು ಕರೆದಾಗ ಏಳಲಿಲ್ಲ ಎಂಬ ಕಾರಣಕ್ಕಾಗಿ ಸಿಟ್ಟಿನಿಂದ ಮಗುವಿನ ತಲೆಗೆ ಮಾರಣಾಂತಿಕವಾಗಿ ಥಳಿಸಿದ್ದರಿಂದ ಮಗು ದುರ್ಮರಣಕ್ಕೀಡಾಗಿತ್ತು. ತಾನು ಮಗುವನ್ನು ಕೊಲೆಗೈದಿರುವ ವಿಷಯ ಯಾರಿಗೂ ತಿಳಿಯಬಾರದೆಂದು ಮರೆಮಾಚುವ ಉದ್ದೇಶದಿಂದ ಕಾಫಿ ತೋಟದೊಳಗೆ ಮನೋಜ್ ಎಂಬವನ ಜೊತೆ ಸೇರಿ ಮಗುವಿನ ಶವವನ್ನು ಹೂತು ಹಾಕಿದ್ದನು.
ಮಡಿಕೇರಿ ಗ್ರಾಮಾಂತರ ಪೊಲೀಸರಿಗೆ ದೊರೆತ ದೂರಿನ್ವಯ ಪ್ರಕರಣವನ್ನು ದಾಖಲು ಮಾಡಿಕೊಂಡ ಪೊಲೀಸರು ತನಿಖೆ ನಡೆಸಿದಾಗ ಮೇಲ್ನೋಟಕ್ಕೆ ಪ್ರಕರಣ ಸಾಬೀತಾದ ಮೇರೆಗೆ ಆರೊಪಿಯ ವಿರುದ್ಧ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪಣ ಪತ್ರವನ್ನು ಸಲ್ಲಿಸಿದ್ದರು.
ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ 1ನೇ ಅಧಿಕ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ವಿಚಾರಣೆ ನಡೆಸಿದ ಸಂದರ್ಭ ಸಾಕ್ಷಿಗಳ ವಿಚಾರಣೆಯಿಂದ ಆರೊಪಿ ಸುರೇಶನು ಕೊಲೆ ಮಾಡಿರುವುದು ಮತ್ತು ಕೊಲೆಯನ್ನು ಮರೆಮಾಚಲು ಯತ್ನಿಸಿರುವುದು ಸಾಬೀತಾಗಿರುವುದರಿಂದ ನ್ಯಾಯಾಧೀಶರಾದ ಡಿ. ಪವನೇಶ್ ಅವರು ಆರೋಪಿ ಸುರೇಶನಿಗೆ ಕೊಲೆ ಮಾಡಿದ ಅಪರಾಧಕ್ಕಾಗಿ ಕಠಿಣ ಜೀವಾವಧಿ ಶಿಕ್ಷೆ ಮತ್ತು 5000 ರೂ. ದಂಡ, ಅಲ್ಲದೆ ಕೊಲೆ ಮಾಡಿದ ಕೃತ್ಯವನ್ನು ಮರೆಮಾಚಿದ ಅಪರಾಧಕ್ಕಾಗಿ ಮತ್ತೆ 5 ವರ್ಷಗಳ ಕಠಿಣ ಸಜೆ ಸಹಿತ 2500 ದಂಡವನ್ನು ವಿಧಿಸಿ ತೀರ್ಪು ನೀಡಿರುತ್ತಾರೆ.
ಪಾವತಿಯಾದ ದಂಡ ಹಣದಲ್ಲಿ 5000 ರೂ.ವನ್ನು ಮಗುವಿನ ತಾಯಿಗೆ ಪರಿಹಾರವಾಗಿ ನೀಡಲು ಆದೇಶದಲ್ಲಿ ತಿಳಿಸಿದ್ದಾರೆ. ಪ್ರಕರಣದ ವಿಚಾರಣೆಯನ್ನು 1ನೇ ಅಧಿಕ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ಸರಕಾರಿ ಅಭಿಯೋಜಕಿ ಶ್ರೀಮತಿ ಎ. ಕೃಷ್ಣವೇಣಿ ಅವರು ಅಂತಿಮ ವಾದ ಮಂಡಿಸಿದ್ದಾರೆ.