ಚಾಮರಾಜನಗರ: ಗುಂಡ್ಲುಪೇಟೆ ತಾಲೂಕಿನ ತೆರಕಣಾಂಬಿಯಲ್ಲಿರುವ ಕೆರೆ ರೈತರು ಸೇರಿದಂತೆ ಜನ ಜಾನುವಾರುಗಳ ಜೀವನಾಡಿಯಾಗಿದೆ. ಆದರೆ ಈ ಬಾರಿ ಬರದಿಂದಾಗಿ ಕೆರೆ ಬತ್ತಿಹೋಗಿ ಮೈದಾನದಂತಾಗಿದೆ. ಆದ್ದರಿಂದ ನದಿ ಮೂಲದಿಂದ ನೀರು ಹರಿಸಿ ಕೆರೆಯನ್ನು ತುಂಬಿಸಿ ಎನ್ನುವುದು ರೈತರ ಬಹು ದಿನದ ಬೇಡಿಕೆಯಾಗಿದೆ. ಕಳೆದ ವರ್ಷ ಜಿಲ್ಲೆಯ ಹಲವು ಕೆರೆಗಳಿಗೆ ನದಿಯಿಂದ ನೀರು ತುಂಬಿಸುವ ಕಾರ್ಯ ನಡೆದಿತ್ತು. ಆದರೆ ಈ ಬಾರಿ ಅದ್ಯಾವುದೂ ನಡೆದಿಲ್ಲ. ಪರಿಣಾಮ ಕೆರೆಗಳು ಒಣಗಿದ್ದು ಇದನ್ನೇ ನಂಬಿದ್ದ ಜನ ಜಾನುವಾರುಗಳು ನೀರಿಗಾಗಿ ಸಂಕಷ್ಟ ಪಡುವಂತಾಗಿದೆ.
ಕೆರೆಯಲ್ಲಿ ನೀರು ಆರಿದ್ದರಿಂದ ಸುತ್ತಮುತ್ತ ಇರುವ ರೈತರ ಕೊಳವೆಬಾವಿಗಳಲ್ಲಿ ಅಂತರ್ಜಲ ಮಟ್ಟ ಸಂಪೂರ್ಣ ಕುಸಿದಿದ್ದು ನೀರೇ ಬಾರದಂತಾಗಿದೆ. ಆದ್ದರಿಂದ ತೆರಕಣಾಂಬಿ ಕೆರೆಗೆ ನದಿ ಮೂಲದಿಂದ ನೀರು ತುಂಬಿಸಲು ಕ್ರಮ ಕೈಗೊಳ್ಳಿ ಎಂಬ ಆಗ್ರಹವನ್ನು ರೈತ ಸಂಘ ಮಾಡುತ್ತಾ ಬಂದಿದೆ. ಕಳೆದ ವರ್ಷ ತೆರಕಣಾಂಬಿ ಕೆರೆಗೆ ನೀರು ತುಂಬಿಸಲಾಗಿತ್ತು. ಪರಿಣಾಮವಾಗಿ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಕಾಡಿರಲಿಲ್ಲ. ಸುತ್ತಮುತ್ತ ಅಂತರ್ಜಲವೂ ಹೆಚ್ಚಾಗಿತ್ತು. ಕಳೆದ ಆರು ತಿಂಗಳಿನಿಂದಲೂ ಕೆರೆಗೆ ನೀರು ತುಂಬಿಸಲು ಮನವಿ ಮಾಡುತ್ತಿದ್ದರೂ ಯಾರೂ ಗಮನಹರಿಸುತ್ತಿಲ್ಲ ಹೀಗಾಗಿ ಸಮೀಪದ ಹುತ್ತೂರು ಗೋಶಾಲೆಯ ಜಾನುವಾರುಗಳಿಗೂ ನೀರಿನ ಸಮಸ್ಯೆ ಕಾಡುತ್ತಿದೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.
ತೆರಕಣಾಂಬಿ, ಶ್ಯಾನಾಡ್ರಹಳ್ಳಿ, ಬಲಚವಾಡಿ ಹಾಗೂ ಹುತ್ತೂರು ಗ್ರಾಮದ ಕೆರೆಗೆ ನೀರು ಹರಿಸಿದರೆ ಇಲ್ಲಿನ ರೈತರು ಜೀವನ ನಿರ್ವಹಣೆ ಮಾಡಲು ಸಾಧ್ಯವಾಗುತ್ತದೆ. ಜಾನುವಾರುಗಳಿಗೂ ಅನುಕೂಲವಾಗುತ್ತದೆ ಎಂದಿರುವ ರೈತಸಂಘದ ಜಿಲ್ಲಾ ಸಂಚಾಲಕ ಟಿ.ಎಸ್.ಶಾಂತಮಲ್ಲಪ್ಪ ಜಿಲ್ಲಾಡಳಿತ ಇತ್ತ ಗಮನಹರಿಸಬೇಕಾಗಿದೆ ಎಂದು ಮನವಿ ಮಾಡಿದ್ದಾರೆ.