ಮೈಸೂರು: ಮಾಧ್ಯಮಗಳ ಜೊತೆ ಮಾತನಾಡಿದ ಸತೀಶ್ ಜಾರಕಿ ಹೊಳಿ ನಾನು ಜೆಡಿಎಸ್ ಸೇರುವ ವಿಚಾರ ವದಂತಿಯಷ್ಟೇ. ಜೆಡಿಎಸ್ ಸೇರುವ ಪ್ರಶ್ನೆಯೇ ಇಲ್ಲ ಎಂದರು. ನಾನು ಸಚಿವ ಸ್ಥಾನದ ಆಕಾಂಕ್ಷಿ ಅಲ್ಲ. ರಮೇಶ್ ಜಾರಕಿ ಹೊಳಿಯನ್ನು ಸಚಿವ ಸ್ಥಾನದಿಂದ ಕೈ ಬಿಡುವುದು ಸಿಎಂ ಹಾಗೂ ಪಕ್ಷದ ಅಧ್ಯಕ್ಷರ ವಿವೇಚನೆಗೆ ಬಿಟ್ಟ ವಿಚಾರವಾಗಿದೆ.
ಪಕ್ಷ ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ಧನಾಗಿದ್ದೇನೆ. ಅಲ್ಲದೇ ನಾನು ಮತ್ತೇ ಸಚಿವ ಸ್ಥಾನ ಕೇಳಿಲ್ಲ. ಸದ್ಯಕ್ಕೆ ಈ ಬಗ್ಗೆ ಚರ್ಚೆ ಅನವಶ್ಯಕ. ನನಗೆ ಸಚಿವ ಸ್ಥಾನದ ಬಗ್ಗೆ ಆಸೆ, ವ್ಯಾಮೋಹವಿಲ್ಲ. ಹಾಗಾಗಿ ನಾನೇ ರಾಜೀನಾಮೆ ನೀಡಿ ಹೊರ ಬಂದಿದ್ದೇನೆ. ಸಚಿವ ಸ್ಥಾನಕ್ಕೆ ಲಾಬಿ ಮಾಡಬೇಕೆಂದಿದ್ದರೆ ಏಳೂವರೆ ತಿಂಗಳ ಹಿಂದೆಯೇ ಮಾಡುತ್ತಿದ್ದೇ. ಸದ್ಯಕ್ಕೆ ಪಕ್ಷ ಸಂಘಟನೆಯಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳುವುದೇ ನನ್ನ ಉದ್ದೇಶವಾಗಿದೆ. ನಂಜನಗೂಡು ಹಾಗೂ ಗುಂಡ್ಲುಪೇಟೆ ಉಪ ಚುನಾವಣೆಯಲ್ಲಿ ಸಕ್ರಿಯವಾಗಿ ಭಾಗವಹಿಸಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸುತ್ತೇನೆ ಎಂದು ತಿಳಿಸಿದರು.
ನನ್ನ ಮತ್ತು ಮುಖ್ಯಮಂತ್ರಿಗಳ ಸಂಬಂಧ ಗಟ್ಟಿಯಾಗಿಯೇ ಇದೆ. ಕಾಂಗ್ರೆಸ್ ಬಿಟ್ಟು ನಾನು ಯಾವುದೇ ಪಕ್ಷ ಸೇರುವ ಪ್ರಶ್ನೆಯೇ ಇಲ್ಲ. ಸಂಪುಟದಿಂದ ಹೊರಬಂದ ಮೇಲೆ ಸಮಾಜ ಸೇವೆ, ಪಕ್ಷ ಸಂಘಟನೆಗೆ ಒತ್ತು ನೀಡಿದ್ದೇನೆ. ಮುಂದೆ ನಡೆಯುವ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪರ ಕೆಲಸ ಮಾಡಲು ಸಿದ್ಧನಿದ್ದೇನೆ ಎಂದರು.