ಮಡಿಕೇರಿ: ರಾಜ್ಯ ಮಾತ್ರವಲ್ಲದೆ, ರಾಷ್ಟ್ರವ್ಯಾಪಿ ಸುದ್ದಿಯಾಗಿದ್ದ ದಿಡ್ಡಳ್ಳಿ ನಿರಾಶ್ರಿತರ ಹೋರಾಟ ಸರ್ಕಾರದ ಭರವಸೆಯ ಬಳಿಕ ಅಂತ್ಯಗೊಂಡಿದ್ದರೂ ಹಗ್ಗಜಗ್ಗಾಟ ಮಾತ್ರ ಮುಂದುವರೆದಿದೆ. ಈಗಾಗಲೇ ದಿಡ್ಡಳ್ಳಿಯಲ್ಲಿರುವ ನಿರಾಶ್ರಿತರಿಗೆ ಅಲ್ಲಿನ ಮೀಸಲು ಅರಣ್ಯದೊಳಗೆ ನಿವೇಶನ ನೀಡುವುದು ಅಸಾಧ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸೀತಾರಾಂ ಸ್ಪಷ್ಟಪಡಿಸಿದ್ದರೆ, ನಿರಾಶ್ರಿತರ ಪರ ಹೋರಾಟ ನಡೆಸುತ್ತಿರುವ ಕೆಲ ನಾಯಕರು ಅಲ್ಲಿಯೇ ನಿವೇಶನ ನೀಡಬೇಕು ಎಂಬ ಹಠಕ್ಕೆ ಬಿದ್ದಿದ್ದಾರೆ.
ನಿವೇಶನ ರಹಿತರಿಗೆ ನಿವೇಶನವನ್ನು ಜಿಲ್ಲೆಯ ಬೇರೆಡೆಗಳಲ್ಲಿ ಗುರುತಿಸಿ ನೀಡಲು ಜಿಲ್ಲಾಡಳಿತ ಮುಂದಾಗಿದ್ದರೆ, ಆ ತಾಲೂಕಿನಲ್ಲಿ ಸೂರಿಲ್ಲದವರು ಬಹಳಷ್ಟು ಮಂದಿಯಿದ್ದು ನಾವೆಲ್ಲರೂ ಸೂರಿಲ್ಲದೆ ಬದುಕುತ್ತಿದ್ದೇವೆ ನಮಗೆ ಮೊದಲು ಸೂರು ನೀಡಿ ಬಳಿಕ ಅವರಿಗೆ ನೀಡಿ ಎಂಬ ಮಾತುಗಳನ್ನು ಹೇಳುತ್ತಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ ಸೀತಾರಾಂ ಅವರು ದಿಡ್ಡಳ್ಳಿ ನಿರಾಶ್ರಿತರಿಗೆ ಮೀಸಲು ಅರಣ್ಯದಲ್ಲಿ ನಿವೇಶನ ನೀಡಲು ಕಾನೂನು ಭಾಗದಲ್ಲಿಯೂ ಅವಕಾಶವಿಲ್ಲ. ಕಾನೂನನ್ನು ಮೀರಿ ಸರ್ಕಾರ ಅಂತಹ ಕ್ರಮಕ್ಕೆ ಮುಂದಾಗುವದಿಲ್ಲ. ಅಲ್ಲಿನ ನಿರಾಶ್ರಿತರಿಗೆ ಜಿಲ್ಲೆಯ ಬೇರೆಡೆಗಳಲ್ಲಿ ನಿವೇಶನ ನೀಡಲಾಗುವುದು. ಈಗಾಗಲೇ ನಾಲ್ಕು ಕಡೆಗಳಲ್ಲಿ ನಿವೇಶನ ಗುರುತಿಸಲಾಗಿದ್ದು, ಕೆಲವೇ ದಿನಗಳಲ್ಲಿ ಜಿಲ್ಲಾಡಳಿತ ಈ ಬಗ್ಗೆ ಕಾರ್ಯೋನ್ಮುಖವಾಗಲಿದೆ ಎಂದು ತಿಳಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಭೂಮಿ ಮತ್ತು ವಸತಿ ವಂಚಿತರ ಹೋರಾಟ ಸಮಿತಿಯ ಎ.ಕೆ.ಸುಬ್ಬಯ್ಯ ಅವರು ಉಸ್ತುವಾರಿ ಸಚಿವರ ಮೇಲೆ ಹರಿಹಾಯ್ದಿದ್ದಾರೆ ಅಲ್ಲದೆ ಅವರು ಭೇಟಿ ನೀಡಿದರೆ ಕಪ್ಪು ಬಾವುಟ ಪ್ರದರ್ಶಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಸಮಾಜ ಕಲ್ಯಾಣ ಸಚಿವ ಆಂಜನೇಯ ಅವರು ದಿಡ್ಡಳ್ಳಿ ನಿರಾಶ್ರಿತರಿಗೆ ಅದೇ ಪ್ರದೇಶದಲ್ಲಿ ಕಾನೂನಿನ ಚೌಕಟ್ಟಿನಡಿ ಅವಕಾಶವಿದ್ದರೆ ನಿವೇಶನ ಮಂಜೂರು ಮಾಡುವುದಾಗಿ ಭರವಸೆ ನೀಡಿದ್ದರೆ, ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್.ಸೀತಾರಾಮ್ ಅವರು ನಿವೇಶನ ನೀಡಲು ಸಾಧ್ಯವಿಲ್ಲವೆಂದು ಹೇಳುವ ಮೂಲಕ ದೀನ ದಲಿತರ ವಿರೋಧಿಯಂತೆ ವರ್ತಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಅಲ್ಲದೆ ಸಚಿವರು ದಿಡ್ಡಳ್ಳಿ ವಿಚಾರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ನಡೆದ ಸಭೆಗೂ ಗೈರು ಹಾಜರಾಗಿ ಇದೀಗ ಆಗಿರುವ ನಿರ್ಧಾರಕ್ಕೆ ತದ್ವಿರುದ್ಧವಾಗಿ ಹೇಳಿಕೆ ನೀಡುತ್ತಿದ್ದಾರೆ ಎಂದು ದೂರಿದರು. ಇದೆಲ್ಲವನ್ನು ಗಮನಿಸಿದರೆ ಸದ್ಯ ದಿಡ್ಡಳ್ಳಿ ನಿರಾಶ್ರಿತರ ಸಮಸ್ಯೆ ಪರಿಹಾರವಾಗುವ ಲಕ್ಷಣಗಳು ಕಾಣುತ್ತಿಲ್ಲ…