ಮಡಿಕೇರಿ: ಕೊಡಗಿನ ಹಲವೆಡೆ ಶುಕ್ರವಾರ ಮತ್ತು ಶನಿವಾರ ಎರಡು ದಿನಗಳ ಕಾಲ ಮಳೆ ಸುರಿದಿದ್ದು, ಭಾಗಮಂಡಲ ವ್ಯಾಪ್ತಿಯಲ್ಲಿ ಹೆಚ್ಚಿನ ಮಳೆಯಾಗಿದೆ. ಉತ್ತಮವಾಗಿ ಮಳೆ ಸುರಿದಿದ್ದರೂ ಇಲ್ಲಿನವರ ಮುಖದಲ್ಲಿ ಮಾತ್ರ ನಗುವಿಲ್ಲದಂತಾಗಿದೆ. ಕಾರಣ ಇದು ಅಕಾಲಿಕ ಮಳೆಯಾಗಿದ್ದು, ಕಾಫಿ ಬೆಳೆಗಾರರು ತೊಂದರೆ ಅನುಭವಿಸುವಂತಾಗಿದೆ.
ಜಿಲ್ಲೆಯಾದ್ಯಂತ ಕಾಫಿ ಕೊಯ್ಲು ಸಮಾರೋಪಾದಿಯಲ್ಲಿ ಸಾಗಿದ್ದು, ಮೋಡ ಕವಿದ ವಾತಾವರಣದಿಂದ ಕೊಯ್ಲು ಮಾಡಿ ಒಣ ಹಾಕಿದ ಕಾಫಿ ಒಣಗದೆ ಒಂದೆಡೆ ತೊಂದರೆಯಾಗಿದ್ದರೆ, ಮತ್ತೊಂದೆಡೆ ಮಳೆಬಂದು ನೀರಿನಲ್ಲಿ ಕೊಚ್ಚಿಹೋಗಿರುವ, ಗಿಡದಿಂದ ನೆಲಕ್ಕೆ ಉದುರುತ್ತಿರುವ ಸುದ್ದಿಗಳು ಬಂದಿವೆ ಇನ್ನು ಸ್ವಲ್ಪ ದಿನ ಕಳೆದು ಮಳೆ ಬಂದಿದ್ದರೆ ಎಲ್ಲದಕ್ಕೂ ಒಳ್ಳೆಯದಾಗುತ್ತಿತ್ತು ಎನ್ನುವುದು ಬೆಳೆಗಾರರ ಮಾತಾಗಿದೆ.
ಈಗಾಗಲೇ ಹಲವೆಡೆ ಭಾರೀ ಮಳೆಯೇ ಸುರಿದಿದ್ದು ಕಾಫಿ ಕೊಯ್ಲು ಮಾಡಿ ಮುಗಿಸಿದ ಹಲವರಿಗೆ ಸಂತೋಷ ತಂದಿದೆ. ಏಕೆಂದರೆ ಮಳೆ ಬಾರದೆ ಹೋಗಿದ್ದರೆ ಹನಿ ನೀರಾವರಿ ಮೂಲಕ ನೀರು ಹಾಯಿಸಿ ಹೂ ಬರಿಸಬೇಕಿತ್ತು. ಈ ಬಾರಿ ನೀರಿಗೆ ತೊಂದರೆಯಾಗಿರುವುದರಿಂದ ಏನಪ್ಪಾ ಮಾಡೋದು ಎಂಬ ಚಿಂತೆಯಲ್ಲಿದ್ದವರಿಗೆ ವರದಾನವಾಗಿದೆ. ಜತೆಯಲ್ಲಿಯೇ ಸಾವಿರಾರು ರೂಪಾಯಿ ಉಳಿತಾಯವಾಗಿದೆ. ಆದರೆ ಶೇ. 30ರಷ್ಟು ಮಾತ್ರ ಕಾಫಿ ಕೊಯ್ಲು ಕೆಲಸ ಮುಗಿಸಿದ್ದರೆ, ಹೆಚ್ಚಿನ ಬೆಳೆಗಾರರು ಕಾಫಿ ಕೊಯ್ಲುನಲ್ಲಿ ತೊಡಗಿಸಿಕೊಂಡಿದ್ದಾರೆ.
ಒಂದೆಡೆ ಕಾರ್ಮಿಕರ ಸಮಸ್ಯೆ ಮತ್ತೊಂದೆಡೆ ಮೋಡದ ವಾತಾವರಣವಿರುವುದರಿಂದ ಕಾಫಿ ಕಣದಲ್ಲಿ ಒಣಗಿಸಲು ಸಾಧ್ಯವಾಗದೆ ಪರದಾಡುತ್ತಿರುವ ಬೆಳೆಗಾರರಿಗೆ ಮಳೆ ಬಂದು ಇನ್ನಷ್ಟು ತೊಂದರೆ ಅನುಭವಿಸುವಂತಾಗಿದೆ. ಮಳೆಯಿಂದಾಗಿ ಗಿಡದಲ್ಲಿದ್ದ ಕಾಫಿ ಫಸಲು ಉದುರುತ್ತಿವೆ.
ಮಳೆಯ ಕಾರಣ ಫಸಲು ಇರುವಾಗಲೇ ಮೊಗ್ಗು ಬಂದು ಹೂ ಅರಳುವುದರಿಂದ ಕೊಯ್ಲಿಗೆ ಕಷ್ಟವಾಗಲಿದೆ ಅಲ್ಲದೆ ಕಾಫಿ ಕೊಯ್ಲು ಮಾಡುವ ಸಂದರ್ಭ ಹೂವಿಗೆ ತೊಂದರೆಯಾಗಿ ಮುಂದಿನ ವರ್ಷ ಫಸಲು ಕಡಿಮೆಯಾಗುವ ಸಾಧ್ಯತೆ ಹೆಚ್ಚಾಗಿದೆ. ಒಟ್ಟಾರೆ ಅಕಾಲಿಕ ಮಳೆಯಿಂದ ಕೊಡಗಿನಲ್ಲಿ ಕಾಫಿ ಬೆಳೆಗಾರರಿಗೆ ಹೆಚ್ಚಿನ ತೊಂದರೆಯಾಗಿದೆ. ಅದನ್ನು ಹೊರತು ಪಡಿಸಿ ಉಳಿದಂತೆ ಒಂದಷ್ಟು ಉಪಯೋಗವೂ ಆಗಿದೆ.
ಮುಂಗಾರು ಮಳೆ ಕಡಿಮೆ ಸುರಿದ ಕಾರಣ ನೀರಿನ ಜಲ ಮೂಲಗಳು ಬತ್ತುವ ಸಾಧ್ಯತೆಯಿತ್ತಾದರೂ ಸಧ್ಯ ಮಳೆಯಿಂದಾಗಿ ವಾತಾವರಣ ತಂಪಾಗಿ ತೇವಾಂಶ ಉಳಿಯುವುದರಿಂದ ಮುಂದಿನ ದಿನಗಳಲ್ಲಿ ಹೀಗೆಯೇ ಬಂದಿದ್ದೇ ಆದರೆ ಹೇಗೋ ಪಾರಾಗಬಹುದಾಗಿದೆ. ಇನ್ನು ಅರಣ್ಯಗಳಲ್ಲಿನ ಕುರುಚಲು ಗಿಡಗಳು ಒಣಗಿ ಯಾವಾಗ ಬೇಕಾದರೂ ಅಗ್ನಿ ಅನಾಹುತ ಸಂಭವಿಸುವ ಪರಿಸ್ಥಿತಿ ನಿರ್ಮಾಣವಾಗಿತ್ತಾದರೂ ಮಳೆಯಿಂದ ಗಿಡಮರಗಳು ಪುಳಕಗೊಂಡಿದ್ದು, ಒಂದಷ್ಟು ನಷ್ಟ, ಕಷ್ಟದೊಂದಿಗೆ ಪುಳಕವನ್ನೂ ತಂದಿರುವುದಂತು ಸತ್ಯ…