ಮೈಸೂರು: ಚಾಮರಾಜನಗರ ಅರಣ್ಯದಲ್ಲಿ ಆನೆಗಳು ಮೃತಪಡುತ್ತಿದ್ದರೆ ಅತ್ತ ಕೊಡಗಿನಲ್ಲಿ ಹುಲಿಗಳು ಒಂದಲ್ಲೊಂದು ಕಾರಣಕ್ಕೆ ಸಾವನ್ನಪ್ಪುತ್ತಿವೆ. ಚಾಮರಾಜನಗರದ ಬಂಡೀಪುರ ಅರಣ್ಯ ವ್ಯಾಪ್ತಿಯಲ್ಲಿ ಸಾಯುವ ಆನೆಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಕೆಲ ದಿನಗಳ ಹಿಂದೆ ವಿದ್ಯುತ್ ಸ್ಪರ್ಶಿಸಿ ಕಾಡಾನೆ ಸತ್ತ ಸುದ್ದಿ ಹಸಿರಿರುವಾಗಲೇ ಮತ್ತೊಂದು ಗಂಡಾನೆ ಕಾದಾಟದಲ್ಲಿ ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ.
ಬಂಡೀಪುರ ರಾಷ್ಟ್ರೀಯ ಉದ್ಯಾನದ ಗೋಪಾಲಸ್ವಾಮಿಬೆಟ್ಟ ಅರಣ್ಯ ವಲಯದ ಹಂಗಳದ ಗ್ರಾಮದ ಬಳಿಯ ಹಿರಿಕೆರೆ ಪ್ರದೇಶದ ವ್ಯಾಪ್ತಿಯಲ್ಲಿ ಸುಮಾರು ಎಂಟು ವರ್ಷದ ಆನೆ ಮೃತಪಟ್ಟಿದೆ. ಇದು ಮತ್ತೊಂದು ಬಲಿಷ್ಠ ಆನೆಯೊಂದಿಗೆ ಕಾದಾಡಿ ಸಾವನ್ನಪ್ಪಿರುವುದು ದೃಢಪಟ್ಟಿದೆ. ಕಾಡಾನೆ ಮೃತಪಟ್ಟ ವಿಷಯ ತಿಳಿಯುತ್ತಿದ್ದಂತೆಂಯೇ ಸ್ಥಳೀಯರು ಆಗಮಿಸಿ ಪೂಜೆ ಸಲ್ಲಿಸಿದ್ದಾರೆ. ಅರಣ್ಯಾಧಿಕಾರಿಗಳು ಆಗಮಿಸಿ ಮರಣೋತ್ತರ ಪರೀಕ್ಷೆ ಬಳಿಕ ಅಂತ್ಯಕ್ರಿಯೆ ನಡೆಸಿದ್ದಾರೆ. ಕೊಡಗಿನಲ್ಲಿ ಹುಲಿ ಬಲಿ ದಕ್ಷಿಣ ಕೊಡಗಿನ ಶ್ರೀಮಂಗಲ ಸಮೀಪದ ಕುಮಟೂರು ಗ್ರಾಮದಲ್ಲಿ ಕಾಡುಹಂದಿಗೆ ಹಾಕಿಟ್ಟಿದ್ದ ಉರುಳಿಗೆ ಹೆಣ್ಣು ಹುಲಿಯೊಂದು ಸಿಲುಕಿ ಸಾವನ್ನಪ್ಪಿದೆ.
ಕಾಡಿನಿಂದ ತೋಟದತ್ತ ಕಾಡು ಹಂದಿಗಳು ಬರುವ ಸಾಧ್ಯತೆಯಿದ್ದರಿಂದ ಅವುಗಳನ್ನು ಸೆರೆಹಿಡಿಯುವ ಸಲುವಾಗಿ ದುಷ್ಕಮರ್ಿಗಳು ತೋಟದ ಕಾಡಂಚಿನಲ್ಲಿ ಉರುಳು ಹಾಕಿಟ್ಟಿದ್ದರು. ಅದೇ ಮಾರ್ಗವಾಗಿ ಬಂದ ಸುಮಾರು ಐದು ವರ್ಷದ ಹೆಣ್ಣು ಹುಲಿ ಅದರಲ್ಲಿ ಸಿಲುಕಿ ಸಾವನ್ನಪ್ಪಿದೆ. ಈ ಘಟನೆ ಎರಡು ದಿನಗಳ ಹಿಂದೆಯೇ ನಡೆದಿದ್ದು, ಅರಣ್ಯ ಸಿಬ್ಬಂದಿಗಳು ಗಸ್ತು ತಿರುಗುವಾಗ ಬೆಳಕಿಗೆ ಬಂದಿದೆ. ಉರುಳು ಹಾಕಿದವರು ಯಾರು ಎಂಬುದರ ಬಗ್ಗೆ ಅರಣ್ಯ ಇಲಾಖೆ ತನಿಖೆ ಆರಂಭಿಸಿದೆ.
ಹುಣಸೂರು ವಿಭಾಗದ ವನ್ಯಜೀವಿ ತಜ್ಞ ಡಾ. ಉಮಾಶಂಕರ್ ಅವರು ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಅಂತ್ಯಕ್ರಿಯೆ ನಡೆಸಲಾಗಿದೆ. ಕೊಡಗಿನಲ್ಲಿ ಹುಲಿ ಹಾವಳಿ ಹೆಚ್ಚಾಗಿದ್ದು ಕಾಡಂಚಿನ ಜನ ಭಯದಲ್ಲಿ ಓಡಾಡುವಂತಾಗಿದೆ. ಆಗಾಗ್ಗೆ ಜಾನುವಾರುಗಳ ಮೇಲೆ ದಾಳಿ ಮಾಡುತ್ತಿರುವ ಹುಲಿಗಳನ್ನು ಕಾಡಿಗೆ ಅಟ್ಟುವಲ್ಲಿ ಅರಣ್ಯ ಇಲಾಖೆ ನಿರ್ಲಕ್ಷ್ಯ ವಹಿಸುತ್ತಿದೆ. ಪರಿಣಾಮ ಹುಲಿಗಳು ಸಾವಿಗೀಡಾಗುತ್ತಿವೆ. ಕೆಲವೇ ದಿನಗಳಲ್ಲಿ ಕೊಡಗಿನಲ್ಲಿ ಮೂರು ಹುಲಿಗಳು ಸಾವನ್ನಪ್ಪಿದಂತಾಗಿದೆ.