ಚಾಮರಾಜನಗರ: ಪಂಚಾಯ ರಾಜ್ ಜಾರಿ ಮಾಡುವ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವ ಗ್ರಾಮಗಳಿಗೆ ಸರ್ಕಾರ ಗಾಂಧಿ ಪುರಷ್ಕೃತ ಗ್ರಾಮ ಎಂಬ ಪುರಸ್ಕಾರ ನೀಡಿ ಗೌರವಿಸುತ್ತದೆ. ಆದರೆ ಇಂತಹ ಪುರಸ್ಕಾರಕ್ಕೆ ಭಾಜನವಾದ ಗ್ರಾಮವೊಂದು ಇವತ್ತು ಅನೈರ್ಮಲ್ಯ ಹರಡುವ ತಾಣವಾಗಿ ಪರಿವರ್ತನೆಗೊಂಡಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.
ಗುಂಡ್ಲುಪೇಟೆ ತಾಲೂಕಿನ ಹಂಗಳ ಗ್ರಾಮವೇ ಶುಚಿತ್ವದಿಂದ ದೂರವಾಗಿ ಅಶುಚಿತ್ವದ ಗೂಡಾಗಿ ಜನ ಶಾಪ ಹಾಕಿಕೊಂಡು ಓಡಾಡುವ ಮಟ್ಟಿಗೆ ಬಂದು ನಿಂತಿದೆ. ಪಂಚಾಯಿತಿಯ ನಿರ್ಲಕ್ಷ್ಯಕ್ಕೆ ಹಿಡಿಶಾಪ ಹಾಕುತ್ತಿರುವ ಪ್ರಜ್ಞಾವಂತರು ಗಾಂಧಿ ಪುರಸ್ಕೃತ ಗ್ರಾಮಕ್ಕೆ ಒದಗಿ ಬಂದ ಸಂಕಷ್ಟ ನೋಡಿ ಮರಗುತ್ತಿದ್ದಾರೆ. ಪ್ರಮುಖ ಪ್ರವಾಸಿ ತಾಣವಾದ ಹಿಮವದ್ ಗೋಪಾಲಸ್ವಾಮಿ ಬೆಟ್ಟ ಮತ್ತು ಊಟಿಗೆ ತೆರಳುವ ರಸ್ತೆಯಲ್ಲೇ ಸಿಗುವ ಹಂಗಳ ಗ್ರಾಮದಲ್ಲಿ ಸ್ವಚ್ಛತೆ ಮರೀಚಿಕೆಯಾಗಿದ್ದು, ರಸ್ತೆಯುದ್ದಕ್ಕೂ ಕಸದ ರಾಶಿ ತುಂಬಿ ತುಳುಕಾಡುತ್ತಾ ಗಬ್ಬೆದ್ದು ನಾರುತ್ತಿದ್ದು ಇದೇ ಮಾರ್ಗವಾಗಿ ತೆರಳುವ ಪ್ರವಾಸಿಗರು ಮೂಗು ಮುಚ್ಚಿಕೊಂಡು ತೆರಳುವ ಪರಿಸ್ಥಿತಿ ಬಂದೊದಗಿದೆ. ಗ್ರಾಮಕ್ಕೆ ಪ್ರವೇಶವಾಗುತ್ತಿದ್ದಂತೆಯೇ ಎಲ್ಲೆಂದರಲ್ಲಿ ಹರಡಿ ಬಿದ್ದ ಕಸದ ರಾಶಿಗಳು ಸ್ವಾಗತಿಸುತ್ತವೆ. ಕಸ ಹಾಕಲು ನೀಡಿದ ತೊಟ್ಟಿಗಳಲ್ಲಿ ಕಸ ತುಂಬಿ ಚೆಲ್ಲಾಡುತ್ತಿದ್ದರೂ ಅದನ್ನು ತೆರವುಗೊಳಿಸದ ಕಾರಣ ನಾಯಿ, ಹಂದಿಗಳು ಅದರಲ್ಲಿ ಹೊರಳಾಡುತ್ತಾ, ಕಚ್ಚಾಡುತ್ತಾ ಭಯ ಮತ್ತು ಅಸಹ್ಯ ಹುಟ್ಟಿಸುತ್ತಿವೆ.
ಇನ್ನು ಇಲ್ಲಿ ಶೌಚಾಲಯ ನಿರ್ಮಾಣದ ಕನಸು ಸಮಾರೋಪಾದಿಯಲ್ಲಿ ಆಗದ ಕಾರಣದಿಂದಾಗಿ ಈಗಲೂ ಜನ ಶೌಚಕ್ಕೆ ರಸ್ತೆ ಬದಿಯನ್ನೇ ಅವಲಂಬಿಸಿರುವುದರಿಂದ ಬಯಲು ಶೌಚ ಮುಕ್ತ ಗ್ರಾಮ ಎಂಬ ಸರ್ಕಾರದ ಘೋಷಣೆಗೆ ಇಲ್ಲಿ ವಿರುದ್ಧವಾಗಿದೆ. ಎಲ್ಲೆಂದರಲ್ಲಿ ಮಲ ಮೂತ್ರ ವಿಸರ್ಜಿಸುವುದರಿಂದ ಗಬ್ಬೆದ್ದು ನಾರುತ್ತಿರುವುದಲ್ಲದೆ, ಸಾಂಕ್ರಾಮಿಕ ರೋಗಗಳ ಭಯವೂ ಜನರನ್ನು ಕಾಡುತ್ತಿದೆ.
ಪ್ರತಿದಿನ ಉತ್ಪತ್ತಿಯಾಗುವ ಕಸವನ್ನು ಜನರು ತಂದು ತೊಟ್ಟಿಗಳಿಗೆ ಸುರಿಯುತ್ತಾರೆಯಾದರೂ ಸಕಾಲದಲ್ಲಿ ಅದನ್ನು ಬೇರೆಡೆಗೆ ವಿಲೇವಾರಿ ಮಾಡಬೇಕಾದ ಗ್ರಾಮಪಂಚಾಯಿತಿ ಮೀನ ಮೇಷ ಎಣಿಸುತ್ತಿರುವುದರಿಂದ ಅದು ಕೊಳೆತು ದುರ್ವಾಸನೆ ಬೀರುತ್ತಿದೆ. ಆದರೆ ಅದೇ ಮೂಗುಮುಚ್ಚಿದ ವಾತಾವರಣದಲ್ಲಿ ಜನ ಬದುಕಬೇಕಾಗಿದೆ. ಇನ್ನಾದರೂ ಸಂಬಂಧಿಸಿದ ಗ್ರಾಮಪಂಚಾಯಿತಿ ಇತ್ತ ಗಮನಹರಿಸಿ ಗ್ರಾಮದಲ್ಲಿ ಉತ್ತಮ ವಾತಾವರಣ ಕಲ್ಪಿಸಿಕೊಡಬೇಕಿದೆ.