ಚಾಮರಾಜನಗರ: ತಾಲೂಕಿನ ಅಮಚವಾಡಿ ಗ್ರಾಮದಲ್ಲಿ ಕಳೆದ ಒಂದು ತಿಂಗಳಿನಿಂದಲೂ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ ಎಂದು ಆರೋಪಿಸಿ ಗ್ರಾಮಸ್ಥರು ಖಾಲಿ ಕೊಡ ಹಿಡಿದು ಗ್ರಾಮ ಪಂಚಾಯಿತಿ ಕಚೇರಿಗೆ ಮುತ್ತಿಗೆ ಹಾಕಿದ್ದಾರೆ.
ಅಮಚವಾಡಿ ಗ್ರಾಮದ ನೂರಾರು ಮಹಿಳೆಯರು ಮತ್ತು ಪುರುಷರು ಖಾಲಿ ಕೊಡಗಳನ್ನು ಹಿಡಿದು ಗ್ರಾ.ಪಂ. ಕಚೇರಿ ಮುಂದೆ ಜಮಾಯಿಸಿ ಗ್ರಾ.ಪಂ. ಕಚೇರಿಗೆ ಮುತ್ತಿಗೆ ಹಾಕಿ, ಗ್ರಾ..ಪಂ. ಅಧ್ಯಕ್ಷೆ ಮಹದೇವಮ್ಮ ಮತ್ತು ಪಿಡಿಓ ಪ್ರಭಾ ಅವರ ವಿರುದ್ದ ಧಿಕ್ಕಾರದ ಘೋಷಣೆಗಳನ್ನು ಕೂಗಿದರು. ಗ್ರಾಮದಲ್ಲಿ ಹೊಸಕರೆ ಬಳಿ ಗ್ರಾಮಕ್ಕೆ ನೀರು ಪೂರೈಸುವ ಕೊಳೆವೆಬಾವಿ ಮತ್ತು ಗ್ರಾಮದಲ್ಲಿ ಮಾರಿ ಗುಡಿ, ನಾಯಕರ ಹೊಸ ಬಡಾವಣೆ ಹಾಗೂ ಜೋಗಯ್ಯನ ಕಟ್ಟೆ ಅಂಗನವಾಡಿ ಕೇಂದ್ರ ಬಳಿಯಿರುವ ಮೋಟಾರು ಕೆಟ್ಟು ಒಂದು ತಿಂಗಳಾದರು ಇದುವರೆಗೆ ದುರಸ್ತಿ ಮಾಡಿಲ್ಲ ಎಂದು ಆರೋಪಿಸಿದರು.
ನೀರಿಗಾಗಿ ಮಹಿಳೆಯರು ಅಲೆದಾಡಬೇಕಾಗಿದೆ. ಜತೆಗೆ ಖಾಸಗಿಯವರಿಂದ ಒಂದು ಬಿಂದಿಗೆ ನೀರಿಗೆ ಮೂರು ರೂಪಾಯಿ ಕೊಟ್ಟು ಖರೀದಿಸಬೇಕಾಗಿದೆ. ನೀರಿಗೋಸ್ಕರ ಕೂಲಿಗೆ ತೆರಳಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ದೂರಿದರು. ಸ್ಥಳಕ್ಕೆ ತಾ.ಪಂ. ಇಒ ಪ್ರೇಮ್ ಕುಮಾರ್ ಆಗಮಿಸಿ ಸಮಸ್ಯೆ ಪರಿಹರಿಸುವ ಭರವಸೆ ನೀಡಿದ ಮೇರೆಗೆ ಪ್ರತಿಭಟನೆಯನ್ನು ಕೈಬಿಡಲಾಯಿತು.